ಹಿರಿಯಡ್ಕ: ಕಾರಾಗೃಹಕ್ಕೆ ಗಾಂಜಾ ಪೂರೈಕೆ- ಇಬ್ಬರ ವಿರುದ್ಧ ದೂರು
ಹಿರಿಯಡ್ಕ ಮೇ 21(ಉಡುಪಿ ಟೈಮ್ಸ್ ವರದಿ): ಜಿಲ್ಲಾ ಕಾರಾಗೃಹದ ವಿಚಾರಣಾದೀನ ಖೈದಿಯೋರ್ವನಿಗೆ ಗಾಂಜಾ ಪೂರೈಸುತ್ತಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾವಂಜೆ ಗೋಳಿಕಟ್ಟೆಯ ನಿವಾಸಿ ಸುದೀಶ ಮತ್ತು ವರುಣ ಪ್ರಕರಣದ ಆರೋಪಿಗಳು. ಈ ಇಬ್ಬರು ಹಿರಿಯಡ್ಕದ ಕಾರಾಗೃಹದಲ್ಲಿ ಇರುವ ವಿಚಾರಣಾದೀನ ಖೈದಿ ರೇವುನಾಥ ಯಾನೆ ಪ್ರೇಮನಾಥ ಎಂಬಾತನನ್ನು ಭೇಟಿ ಮಾಡಲು ಮೇ 20ರ ಸಂಜೆ ವೇಳೆ ಕಾರಾಗೃಹಕ್ಕೆ ಹೋಗಿದ್ದರು. ಈ ವೇಳೆ ತಮ್ಮ ಬಳಿ ತಂದಿದ್ದ ಹಣ್ಣು ಮತ್ತು ಬಿಸ್ಕೇಟ್‌ಗಳನ್ನು ದ್ವಾರ ಪಾಲಕನಾಗಿದ್ದ ಸಂತೋಷ ದಗಾಟೆ ರವರ ಬಳಿ ಕೊಟ್ಟು, ವಿಚಾರಣಾ ಖೈದಿ ರೇವುನಾಥನಿಗೆ ಕೊಡಲು ತಿಳಿಸಿ, ಖೈದಿಯೊಂದಿಗೆ ಮಾತನಾಡಿ ಹೊರ ಹೋಗಿದ್ದರು.
ಈ ನಡುವೆ ಈ ಇಬ್ಬರು ತಂದಿದ್ದ ವಸ್ತುಗಳನ್ನು ಪರಿಶೀಲಿಸಿದಾಗ ಬಿಸ್ಕೇಟ್ ಮತ್ತು ಹಣ್ಣುಗಳ ಮಧ್ಯದಲ್ಲಿ 10 ರಿಂದ 15 ಗ್ರಾಂ ನಷ್ಟು ಗಾಂಜಾದಂತೆ ತೋರುವ ಸೊಪ್ಪು ಕಂಡು ಬಂದಿದೆ. ಆದ್ದರಿಂದ ನಿಷೇಧಿತ ವಸ್ತುಗಳನ್ನು ಕಾರಾಗೃಹದೊಳಗೆ ನುಸುಳಿಸಲು ಪ್ರಯತ್ನಿಸಿದ ವ್ಯಕ್ತಿಗಳ ವಿರುದ್ದ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವಂಜೆ ಗೋಳಿಕಟ್ಟೆಯ ನಿವಾಸಿ ಸುದೀಶನನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ವರುಣ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆಪೊಲೀಸರು ಬಲೆ ಬೀಸಿದ್ದಾರೆ.