ಉಡುಪಿ: ಸಾಫಲ್ಯ ಟ್ರಸ್ಟ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ ಮೇ 19(ಉಡುಪಿ ಟೈಮ್ಸ್ ವರದಿ): ಸಾಫಲ್ಯ ಟ್ರಸ್ಟ್ ಇದರ ವತಿಯಿಂದ ಉಡುಪಿಯ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸೀನಿಯರ್ ಅಯ್ಯಂಗಾರ್ ಯೋಗ ಟೀಚರ್ ಶೋಭಾ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರಿಯಾದ ಕ್ರಮ ಅನುಸರಿಸಿ ಯೋಗವನ್ನು ದಿನಚರಿಯಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಜೀವನ ನಡೆಸಬಹುದು ಎಂದು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು. ಹಾಗೂ ಸಾಫಲ್ಯ ಟ್ರಸ್ಟ್ ನ ಸಾಮಾಜಿಕ ಚಿಂತನೆ ಮತ್ತು ಅಗತ್ಯವಿರುವವರಿಗೆ ಮಾಡುವ ಸಹಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಸಾಫಲ್ಯ ಟ್ರಸ್ಟ್ ನ ಅಧ್ಯಕ್ಷೆ ರತ್ನ ಅಶೋಕ್ ಶೆಟ್ಟಿ ಅವರು ಮಾತನಾಡಿ, ತಮಗೆ ಯೋಗ ಕಲಿಸಿದ ಯೋಗ ಗುರು ಶೋಭಾ ಎಸ್ ಶೆಟ್ಟಿ ಅವರಿಗೆ ಸನ್ಮಾನಿಸಿರುವುದರಿಂದ ಜೀವನ ಸಾರ್ಥಕವಾಯಿತು ಎಂದು ಹೇಳಿದರು.

ಇದೇ ವೇಳೆ ರಂಜನಾ ಶ್ರೀಧರ್ ಶೆಟ್ಟಿ ಅವರು ಮಾತನಾಡಿ, ಸುಮಾರು 40 ಸಮಾನ ಮನಸ್ಕ ಮಹಿಳೆಯರಿಂದ ಪ್ರಾರಂಭವಾದ ಸಾಫಲ್ಯ ಟ್ರಸ್ಟ್ ಇಲ್ಲಿಯವರೆಗೆ ಸುಮಾರು 500ಕ್ಕೂ ಅಧಿಕ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಬಗ್ಗೆ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಾಫಲ್ಯ ಯಕ್ಷಗಾನ ಮಹಿಳಾ ಬಳಗದವರಿಂದ ರುದ್ರಕೋಪ ಯಕ್ಷಗಾನ ಪ್ರದರ್ಶನ ನಡೆಯಿತು. ಇದೇ ಸಂದರ್ಭದಲ್ಲಿ ಶೇಕಡಾ ನೂರು ಫಲಿತಾಂಶ ಬಂದ ಉಡುಪಿಯ ಬಾಲಕಿಯರ ಕಾಲೇಜಿನ ಮುಖ್ಯಸ್ಥೆ ಇಂದಿರಾ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಾಫಲ್ಯ ಟ್ರಸ್ಟ್‌ನ ಖಜಾಂಚಿ ಕಲಾ ಅಶೋಕ್ ಹೆಗ್ಡೆ, ಟ್ರಸ್ಟ್ ನ ಪ್ರವರ್ತಕರಾದ ನಿರುಪಮಾ ಪ್ರಸಾದ್ ಶೆಟ್ಟಿ, ಶಮಿಳಾ ಹೆಗ್ಡೆ, ಟ್ರಸ್ಟ್ ನ ಪಿಆರ್‌ಓ ಕವಿತಾ ನವೀನ್ ಬಲ್ಲಾಳ್, ತಾರಾದೇವಿ, ಆಶಾ ಪಿ ಶೆಟ್ಟಿ, ಅನುರಿತಾ ಕೀರ್ತಿ ಹೆಗ್ಡೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!