ಉಡುಪಿ: ಆನ್ಲೈನ್ ವಂಚನೆಗೆ 9.02 ರೂ. ಕಳೆದುಕೊಂಡ ಮೂವರು
ಉಡುಪಿ ಮೇ 18(ಉಡುಪಿ ಟೈಮ್ಸ್ ವರದಿ): ಇತ್ತೀಚಿಗೆ ಆನ್ಲೈನ್ ವಂಚನೆ ಜಾಲ ಹೆಚ್ಚಾಗಿದ್ದು ಇಂದು ಒಂದೇ ದಿನ ಸೆನ್ ಅಪರಾಧ ಠಾಣೆಯಲ್ಲಿ ಮೂರು ವಂಚನೆ ಪ್ರಕರಣ ದಾಖಲಾಗಿರುವುದು ವರದಿಯಾಗಿದೆ.
ಉಡುಪಿಯ ಅಂಬಲಪಾಡಿಯ ಇಬ್ಬರು ವ್ಯಕ್ತಿಗಳು ಹಾಗೂ ಕಟಪಾಡಿಯ ಓರ್ವ ಮಹಿಳೆ ಸೇರಿ ಮೂವರು ಆನ್ಲೈನ್ ವಂಚನೆಗೆ ಒಳಗಾಗಿ 9.02 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಉಡುಪಿಯ ಅಂಬಲಪಾಡಿಯ ಸಂದೇಶ ಎಂಬವರ ಮೊಬೈಲ್‌ಗೆ ಮೇ.17 ರಂದು ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡುವ ಬಗ್ಗೆ ಮೆಸೇಜ್ ಕಳುಹಿಸಿದ್ದರು. ಈ ಮೆಸೇಜ್‌ನ್ನು ಬ್ಯಾಂಕ್‌ನದ್ದೇ ಎಂದು ನಂಬಿದ ಸಂದೇಶ ಅವರು ಲಿಂಕ್ ಓಪನ್ ಮಾಡಿ ಸೂಚಿಸಿದಂತೆ ದಾಖಲೆಗಳನ್ನು ನಮೂದಿಸಿದ್ದರು. ಈ ವೇಳೆ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ.2,34,000/- ಹಣವನ್ನು ಮೋಸದಿಂದ ವರ್ಗಾಯಿಸಿ ಕೊಂಡು ನಷ್ಟ ಉಂಟು ಮಾಡಿರುವುದಾಗಿದೆ.
ಮತ್ತೊಂದೆಡೆ ಅಂಬಲಪಾಡಿಯ ದಯಾನಂದ ಎಂಬವರ ಮೊಬೈಲ್ ಗೆ JIO Money App ಓಪನ್ ಆಗಿರುವ ಬಗ್ಗೆ ಅಪರಿಚಿತ ವ್ಯಕ್ತಿಗಳು ಮೆಸೇಜ್ ಕಳುಹಿಸಿ ಹಂತ ಹಂತವಾಗಿ ಒಟ್ಟು ಒಟ್ಟು ರೂ.94,999/- ಹಣವನ್ನು ಆನ್ ಲೈನ್ ಮುಖೇನ ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ.
ಇನ್ನು ಇದೇ ರೀತಿ ಕಟಪಾಡಿಯ ಕುಸುಮ ಎಂಬವರಿಗೆ ಅಪರಿಚಿತ ವ್ಯಕ್ತಿಗಳು ಮೆಸೇಜ್ ಮಾಡಿ ಲಿಂಕ್ ಕಳುಹಿಸಿ, ವಾಟ್ಸ್ ಗ್ರೂಪ್ ಗೆ ಸೇರ್ಪಡೆಗೊಳ್ಳುವಂತೆ ಸೂಚಿಸಿದ್ದರು. ಹಾಗೂ ಗ್ರೂಪ್ ನಲ್ಲಿ ಆ್ಯಪ್ ಒಂದರ ಲಿಂಕ್ ಕಳುಹಿಸಿ ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸುವ ಬಗ್ಗೆ ಆಸೆ ತೋರಿಸಿದ್ದರು. ಇದನ್ನು ನಂಬಿದ ಕುಸುಮ ಅವರು ಹಂತ ಹಂತವಾಗಿ ಒಟ್ಟು 5,73,024 /- ಹಣವನ್ನು ಪಾವತಿಸಿದ್ದರು. ಆದರೆ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ವಂಚಿಸಿದ್ದಾರೆ.
ಈ ಮೂರು ವಿಚಾರಕ್ಕೆ ಸಂಬಂಧಿಸಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.