ಪ್ರಸಾದ್ ನೇತ್ರಾಲಯಕ್ಕೆ ವಿಶ್ವಗುರು ಪರಮಹಂಸ ಮಹಾಮಂಡಲೇಶ್ವರ ಶ್ರೀಗಳ ಭೇಟಿ
ಉಡುಪಿ/ಮಂಗಳೂರು: ಮೇ 18(ಉಡುಪಿ ಟೈಮ್ಸ್ ವರದಿ) ಅಂತರರಾಷ್ಟ್ರೀಯ ಖ್ಯಾತಿಯ ವಿಶ್ವಗುರು ಪರಮಹಂಸ ಮಹಾಮಂಡಲೇಶ್ವರ ಶ್ರೀ ಸ್ವಾಮಿ ಮಹೇಶ್ವರಾನಂದ ಪುರಿ ಶ್ರೀಗಳು ಉಡುಪಿ ಹಾಗೂ ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದರು.
ಮಂಗಳೂರು ಭೇಟಿಯ ಸಂಧರ್ಭದಲ್ಲಿ ಧರ್ಮಸ್ಠಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಪದ್ಮಭೂಷಣ ರಾಜಶ್ರೀ ಡಾ. ಡಿ. ವೀರೇ೦ದ್ರ ಹೆಗ್ಗಡೆ ಹಾಗೂ ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಇವರು ಸ್ವಾಮೀಜಿಯವರನ್ನು ಸ್ವಾಗತಿಸಿದರು.
ಪ್ರಸಾದ್ ನೇತ್ರಾಲಯವನ್ನು ವೀಕ್ಷಿಸಿದ ಶ್ರೀಗಳು ಆಸ್ಪತ್ರೆ ನಡೆಸುತ್ತಿರುವ ಆರೋಗ್ಯ- ಸಮಾಜ ಸೇವೆಗಳನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶ್ರೀಗಳ ಶಿಷ್ಯರಾದ ಸ್ವಾಮಿ ಅವತಾರ್ ಪುರಿ ಹಾಗೂ ಇರಾ ರಾಂಡಿಕ್ ತೋಮಸಿಕ್ ಅವರು ಜತೆಗಿದ್ದರು.
ಮೂಲತ: ರಾಜಾಸ್ಥಾನದ ಪಾಲಿ ಜಿಲ್ಲೆಯಲ್ಲಿ ಹುಟ್ಟಿದ ಶ್ರೀಗಳು ಸಣ್ಣ ವಯಸ್ಸಿನಲ್ಲಿಯೇ ಆಧ್ಯಾತ್ಮಿಕತೆ, ದೇವರ ಬಗ್ಗೆ ವಿಶೇಷ ಆಸ್ಥೆ , ಭಕ್ತಿ ಹೊ೦ದಿ ಸನ್ಯಾಸ ಆಶ್ರಮ ಸ್ವೀಕರಿಸಿದರು. ಭಾರತೀಯ ಆಧ್ಯಾತ್ಮ ಚಿಂತನೆ, ದೇವರಲ್ಲಿ ಭಕ್ತಿ, ಯೋಗ-ಧ್ಯಾನ, ಸಸ್ಯಾಹಾರದ ಪ್ರಯೋಜನ ಮುಂತಾದುವುಗಳ ವಿಶೇಷ ಚಿಂತಕರಾಗಿ, ದೇಶಾದ್ಯಂತ ಅಲ್ಲದೇ ವಿಶ್ವಾದ್ಯಂತ ಭೋಧಕಾರಾಗಿ 3500ಕ್ಕೂ ಅಧಿಕ ಆಶ್ರಮಗಳನ್ನು ಸ್ಥಾಪಿಸಿದ ಇವರು ಲಕ್ಷಾಂತರ ಶಿಷ್ಯ ವರ್ಗ ಹಾಗೂ ಅನುಯಾಯಿಗಳನ್ನು ಹೊಂದಿರುತ್ತಾರೆ.
ಅಲ್ಲದೇ ಶ್ರೀಗಳು ವಿಶ್ವ ಆಧ್ಯಾತ್ಮಿಕ ಪರಿಷತ್ತು, ಮಹಿಳಾ ಶಿಕ್ಷಣ, ಪಶು ಆಶ್ರಮ, ಜಲ ಸಂರಕ್ಷಣೆ ಮುಂತಾದ ನೂರಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇವರ ಸಾಧನೆ, ಕೊಡುಗೆಗಳನ್ನು ಗುರುತಿಸಿ ಇವರು ವಿಶ್ವಗುರು, ಮಹಾ ಮಂಡಲೇಶ್ವರ, ಪರಮಹಂಸ ಎಂಬ ಗೌರವ ಉಪಾದಿಗಳಿಗೆ ಪಾತ್ರರಾಗಿದ್ದಾರೆ.
ಇವರು ರಾಜಸ್ಥಾನದ ಜೋಡಾನ್, ಪಾಲಿ ಇಲ್ಲಿ ಸ್ಥಾಪಿಸಿದ ವಿಶ್ವದ ಅತೀ ದೊಡ್ಡ ಅಧ್ಯಾತ್ಮಿಕ, ಯೋಗ ಆಶ್ರಮದ ಉದ್ಘಾಟನಾ ಸಂಧರ್ಭದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಭೇಟಿ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.