ಗಂಗೊಳ್ಳಿ: ಬೋಟ್ ಮುಳುಗಡೆ 20 ಲ.ರೂ. ನಷ್ಟ
ಉಡುಪಿ ಮೇ.18 (ಉಡುಪಿ ಟೈಮ್ಸ್ ವರದಿ) : ಎರಡು ಬೋಟ್‍ಗಳ ನಡುವೆ ಡಿಕ್ಕಿ ಸಂಬವಿಸಿ ವಡಭಾಂಡೇಶ್ವರದ ಗೋಪಾಲ ಸುವರ್ಣ ಎಂಬವರ ಮಾಲಕತ್ವದ ಬೋಟ್ ಮುಳುಗಡೆಯಾಗಿದ್ದು 20 ಲಕ್ಷ ನಷ್ಟ ಸಂಭಿಸಿರುವ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ವಡಭಾಂಡೇಶ್ವರದ ಗೋಪಾಲ ಸುವರ್ಣ ಎಂಬವರ ಮಾಲಕತ್ವದ IND – KA-02-MM 683 ಮಾಡ್ತಿದೇವಿ II ಎನ್ನು 370 ಬೋಟ್ ನಲ್ಲಿ ಮೇ. 16 ರಂದು ತಾಂಡೇಲರಾದ ಸಾಸ್ತಾನದ ಸುರೇಶ್ ಕುಂದರ್ ಹಾಗೂ ಇತರ ಮೀನುಗಾರ ಕಲಾಸಿಯಾದ ಶಂಕರ ಕುಂದರ್, ಶಂಕರ ಪೂಜಾರಿ, ಯೋಗೇಂದ್ರ, ಫರೀದ ಅಬ್ದುಲ್ ಘನಿ ಶೇಖ್ ರವರೊಂದಿಗೆ ಮೀನುಗಾರಿಕೆಗಾಗಿ ರಾತ್ರಿ 10.30 ಗಂಟೆಗೆ ಭಟ್ಕಳ ಕಡೆಗೆ ಹೊರಟಿದ್ದರು. ಮರುದಿನ ಬೆಳಿಗ್ಗೆ 5.00 ಗಂಟೆಗೆ ಭಟ್ಕಳ ಸಮೀಪ ಶ್ರೀ ದುರ್ಗಾ ಬೋಟಿನವರು ಮುಂಜಾನೆ ಮುಸುಕಿನ ವೇಳೆ ಗೋಪಾಲ ಸುರ್ವರ್ಣರವರ ಬೋಟಿಗೆ ಡಿಕ್ಕಿ ಹೊಡೆದ ಪರಿಣಾಮ ಬೊಟ್ಟಿನ ಮಧ್ಯಭಾಗದ ಅಡಿ ಹಲಗೆಯು ಎದ್ದು ಹೋಗಿದ್ದು, ನೀರು ಒಳಗೆ ಬರಲು ಆರಂಭಿಸಿದೆ. ಈ ವೇಳೆ ಡಿಕ್ಕಿ ಹೊಡೆದ ಬೋಟು ಮತ್ತು ಹತ್ತಿರದ ಇನ್ನೊಂದು ಬೋಟಿನವರು ಅಪಘಾತಕ್ಕೊಳಗಾದ ಬೋಟ್‍ನ್ನು ಗಂಗೊಳ್ಳಿ ಬಂದರಿನ ಕಚ್ಚೇರಿಗೆ ರಿಪೇರಿಗೆ ತರುವಾಗ ಗಂಗೊಳ್ಳಿ, ಅಳಿವೆಯಿಂದ ಸುಮಾರು 8 ರಿಂದ 10 ಮಾರು ದೂರದಲ್ಲಿ ಅವಘಡಗೊಂಡು ದೋಣಿಯು ನೀರಿನಲ್ಲಿ 90% ಅಂಶ ಮುಳುಗಿದೆ. ಬೋಟಿನಲ್ಲಿದ್ದ ಮೀನುಗಾರರನ್ನು ಇತರ ಬೋಟಿನವರು ರಕ್ಷಿಸಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಅವಘಡಗೊಂಡ ಬೋಟಿನಲ್ಲಿ 1,90,000/- ಮೌಲ್ಯದ 2500 ಲೀ. ಡೀಸೆಲ್, 1,50,000/- ರೂ ಮೌಲ್ಯದ ಟ್ರಾಲ್ ಬಲೆ-8, 4,00,000 ರೂ. ಮೌಲ್ಯದ ಅಶೋಕ್ ಲೈಲ್ಯಾಂಡ್ ಇಂಜಿನ್ ಮತ್ತು 2,00,000 ರೂ. ಮೌಲ್ಯದ ಇತರೆ ಉಪಕರಣಗಳು ಸೇರಿ ಮರದ ಬೋಟಿನ ಮೌಲ್ಯ 11,00,000/- ರೂ. ಆಗಿದ್ದು ಒಟ್ಟು 20,00,000/- ನಷ್ಟ ಉಂಟಾಗಿರುತ್ತದೆ ಎಂದು ತಿಳಿಸಿದ್ದಾರೆ.