ಉಡುಪಿ: ರಘುಪತಿ ಭಟ್ ಆಸ್ತಿ 21 ಕೋ., ಸಾಲ 4 ಕೋ.
ಉಡುಪಿ: ಮೇ 17 : ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಕಣಕ್ಕೆ ಇಳಿಯಲು ಚುನಾವಣಾ ಅಧಿಕಾರಿಗಳಿಗೆ ತಮ್ಮ ಆಸ್ತಿಯ ವಿವರಗಳನ್ನು ನೀಡಿದ್ದಾರೆ.
ಚುನಾವಣಾಧಿಕಾರಿಗೆ ಗುರುವಾರ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 21,41,80,000 ಮೊತ್ತದ ಆಸ್ತಿ ಇದ್ದು, ಮನೆ ಮತ್ತು ವಾಹನಕ್ಕಾಗಿ ₹4,10,92,000 ಸಾವಿರ ಸಾಲ ಮಾಡಿರುವುದಾಗಿ ಅವರು ಘೋಷಿಸಿದ್ದಾರೆ. ಅವರ ಚರಾಸ್ತಿ 8,19,80,000 ಆಗಿದ್ದು ಸ್ಥಿರಾಸ್ತಿ 9,76,00,000 ಹೊಂದಿದ್ದಾರೆ. ಪತ್ನಿ ಶಿಲ್ಪಾ ಭಟ್ ಅವರ ಚರಾಸ್ತಿ 1, 11, 24,000. ಪುತ್ರರಿಬ್ಬರಲ್ಲಿ ಒಟ್ಟು ₹21 ಲಕ್ಷ ಇದೆ ಎಂದು ತಿಳಿದು ಬಂದಿದೆ.
ಹಾಗೂ 1 ಎಕರೆ 73 ಸೆಂಟ್ಸ್ ಕೃಷಿಯೇತರ ಜಮೀನು ಮತ್ತು 30 ಸೆಂಟ್ಸ್ ಕೃಷಿ ಜಮೀನು ಹೊಂದಿರುವ ರಘುಪತಿ ಭಟ್ ಅವರು 65 ಸೆಂಟ್ಸ್ ಅಳತೆಯ ನಿವೇಶನ ಹೊಂದಿದ್ದಾರೆ. ಮನೆ ಸಾಲ ₹1, 68,00,000 ಬಾಕಿ ಇದೆ. ವಾಹನ ಸಾಲ ₹11 ಲಕ್ಷ ಕಟ್ಟಬೇಕಿದೆ. ಯಾವುದೇ ಕ್ರಿಮಿನಲ್ ಕೇಸ್ ಕೂಡ ಹೊಂದಿಲ್ಲದ ರಘುಪತಿ ಭಟ್ ಅವರ ಬಳಿ ₹6,68,915, ಪತ್ನಿ ಶಿಲ್ಪಾ ಬಳಿ ₹42,000 ಮತ್ತು ಮಕ್ಕಳ ಬಳಿ ಒಟ್ಟು ₹8 ಸಾವಿರ ನಗದು ಇದೆ ಎಂದು ತಿಳಿದು ಬಂದಿದೆ.
ಉಡುಪಿಯ ಮಹಾಲಕ್ಷ್ಮಿ ಕೊ ಆಪರೇಟಿವ್ ಬ್ಯಾಂಕ್, ಹಿರಣ್ಯ ಬಿಲ್ಡರ್ಸ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಭಾರತ್ ಬಯೊ ಐಎಂಎಂ, ಕೇದಾರೋತ್ಥಾನ ಕೃಷಿ ಉತ್ಪಾದಕರ ಸಂಘ, ತರ್ಜನಿ ಇನ್ಸೂರೆನ್ಸ್, ಅದಾನಿ ದೆ ಗ್ರೀನ್ ಎನರ್ಜಿ, ಅದಾನಿ ಸಿಮೆಂಟ್ ಮತ್ತು ಡೆಲ್ಟಾ ಕಾರ್ಪ್‌ನಲ್ಲಿ ಕುಟುಂಬದ ಅನೇಕ ಷೇರುಗಳು ಇವೆ. ಇಬ್ಬರು ವ್ಯಕ್ತಿಗಳು, 5 ಸಂಸ್ಥೆಗಳಿಗೆ ಲಕ್ಷಾಂತರ ಮೊತ್ತದ ಸಾಲ ನೀಡಿದ್ದಾರೆ.
ಅವರ ಬಳಿ ₹16 ಲಕ್ಷ ಬೆಲೆಯ ಟಾಟಾ ನೆಕ್ಸಾನ್ ಇವಿ, ₹12 ಲಕ್ಷದ ಟೊಯೊಟ ಇನೋವ, ₹6 ಸಾವಿರ ಬೆಲೆಯ ಹೊಂಡಾ ಆ್ಯಕ್ಟಿವಾ ವಾಹನ ಗಳು ಇದ್ದು. ಪತ್ನಿ, ಪುತ್ರರ ಹೆಸರಿನಲ್ಲಿ ವಾಹನಗಳಿಲ್ಲ. ಭಟ್ ಅವರಲ್ಲಿ 400 ಗ್ರಾಂ ಚಿನ್ನ ಮತ್ತು 11 ಕಿಜಿ ಬೆಳ್ಳಿ, ಪತ್ನಿ ಬಳಿ 500 ಗ್ರಾಂ ಚಿನ್ನ ಇದೆ ಎಂಬ ಮಾಹಿತಿ ಲಭ್ಯವಾಗಿದೆ.