ಉಡುಪಿ: ದಂಪತಿಗೆ ಹಲ್ಲೆ- ನಗರ ಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ವಿರುದ್ಧ ದೂರು
ಉಡುಪಿ ಮೇ 12(ಉಡುಪಿ ಟೈಮ್ಸ್ ವರದಿ): ಜಾಗದ ವಿಚಾರದ ತಕರಾರಿಗೆ ಸಂಬಂಧಿಸಿ ದಂಪತಿಗಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ನಗರ ಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಸೇರಿದಂತೆ ಇತರ 6 ಮಂದಿ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಕಕ್ಕುಂಜೆಯ ಸವಿತಾ ಎಂಬವರು ತಮಗಾದ ಹಲ್ಲೆ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಸವಿತಾ ಅವರಿಗೆ ಹಾಗೂ ಬಾಲಕೃಷ್ಣ ಶೆಟ್ಟಿರವರಿಗೂ ಸುಮಾರು 4 ವರ್ಷಗಳಿಂದ ಸವಿತಾ ಅವರ ಮನೆ ಜಾಗ ಹಾಗೂ ಸವಿತಾ ಅವರ ಗಂಡನ ಗ್ಯಾರೇಜ್ ವಿಚಾರದಲ್ಲಿ ತಕರಾರು ಇದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನ್ಯಾಯಾಲಯದಲ್ಲಿ ಇರುತ್ತದೆ. ಈ ನಡುವೆ ಮೇ.10 ರಂದು ಬೆಳಿಗ್ಗೆ ಹಾಗೂ ಮದ್ಯಾಹ್ನದ ವೇಳೆ 2 ಬಾರಿ ಬಾಲಕೃಷ್ಣ ಶೆಟ್ಟಿ ಇತರ ಆರೊಪಿಗಳೊಂದಿಗೆ ಸವಿತಾ ಅವರ ಗಂಡನ ಗ್ಯಾರೇಜ್ ನ ಬಳಿ ಹೋಗಿ ಮಣಿಪಾಲ ಠಾಣೆಯಲ್ಲಿ ದಾಖಲಿಸಿದ ಕೇಸ್ ನ್ನು ವಾಪಾಸು ಪಡೆಯುವಂತೆ ಹಾಗೂ ಇಲ್ಲದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿದ್ದರು.
ಬಳಿಕ ಸಂಜೆ ವೇಳೆ ಸವಿತಾ ಅವರು ಅವರ ಗಂಡ ಮತ್ತು ಮಕ್ಕಳೊಂದಿಗೆ ಕಕ್ಕುಂಜೆ ನಾರಾಯಣ ನಗರದಲ್ಲಿರುವ ಗ್ಯಾರೇಜ್ ನ ಬಳಿ ಹೋಗಿದ್ದಾಗ ಆರೋಪಿ ಬಾಲಕೃಷ್ಣಶೆಟ್ಟಿ ರವರು ಇತರ 29 ಜನರೊಂದಿಗೆ ಗ್ಯಾರೇಜ್ ಬಳಿ ಸ್ಟೀಲ್ ರಾಡ್ ನ್ನು ಹಿಡಿದುಕೊಂಡು ಅಕ್ರಮ ಕೂಟ ಸೇರಿ ನಿಂತುಕೊಂಡಿದ್ದರು. ಈ ಬಗ್ಗೆ ಸವಿತಾ ಅವರ ಗಂಡ ಪ್ರಶ್ನಿಸಿದಾಗ ನಾವು ಗ್ಯಾರೇಜ್ ಕೀಳಲು ನಿಂತುಕೊಂಡಿದ್ದೇವೆ. ನೀನು ಏನು ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ಹಲ್ಲೆ ಮಾಡಿದ್ದು ಈ ವೇಳೆ ತಡೆಯಲು ಹೋದ ಸವಿತಾ ಅವರಿಗೂ ಹಾಗೂ ಅವರ ಗಂಡನಿಗೂ ಆರೋಪಿತರಾದ ಬಾಲಕೃಷ್ಣ ಶೆಟ್ಟಿ, ರಕ್ಷಿತಾ ಶೆಟ್ಟಿ, ರಾಜು, ಗಿರೀಶ್ ಎಂಬುವವರು ಸ್ಟೀಲ್ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.