ಎಸ್‌ಎಸ್‌ಎಲ್‌ಸಿ ಫಲಿತಾಂಶ – ಕುಂದಾಪುರದಲ್ಲಿ ಕೊರಗ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ, ಮೇ 10 : ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಶಂಕರನಾರಾಯಣ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿನಿ ರತ್ನಾ ಅವರು 510 (ಶೇ.81.06) ಅಂಕ ಪಡೆದು ಕನ್ನಡ ಮಾಧ್ಯಮ ವಿಭಾಗದಲ್ಲಿ ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕೊರಗ ಸಮುದಾಯದ ವಿದ್ಯಾರ್ಥಿನಿಯಾಗಿದ್ದಾರೆ.
ಸಿದ್ದಾಪುರ ಸಮೀಪದ ಶಾನ್ಕಟ್ಟು ಆಂತೂರು ನಿವಾಸಿ ಮಂಜು ಮತ್ತು ಗೀತಾ ದಂಪತಿಯ ಪುತ್ರಿಯಾಗಿದ್ದಾರೆ. ತಮ್ಮ ಸಾಧನೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ರತ್ನಾ ಅವರು, ಮನೆಯಿಂದ ಶಾಲೆಗೆ 6-7 ಕಿ.ಮೀ ದೂರವಿದ್ದು ನಿತ್ಯವೂ ಅಣ್ಣ ಬೆಳಿಗ್ಗೆ ಕರೆದೊಯ್ದು ಸಂಜೆ ಕರೆತರುತ್ತಿದ್ದ. ಯಾವುದೇ ಟ್ಯೂಷನ್ ಹೋಗಿಲ್ಲ. ಬೆಳಿಗ್ಗೆ ಬೇಗ ಎದ್ದು ಮನೆಯಲ್ಲಿ ಓದುತ್ತಿದ್ದೆ. ಮುಂದೆ ವಾಣಿಜ್ಯ ಅಥವಾ ವಿಜ್ಞಾನ ವಿಭಾಗದಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ.
ಮತ್ತೊಂದೆಡೆ ಬೈಂದೂರು ವಲಯ ಕ್ಷೇತ್ರ ಶಿಕ್ಷಣ ವ್ಯಾಪ್ತಿಗೊಳಪಡುವ ಮಾವಿನಕಟ್ಟೆಯ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ಪ್ರೌಢಶಾಲೆಯ ವಿದ್ಯಾರ್ಥಿ ದೀಕ್ಷಿತ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 507(ಶೇ.81)ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಕೆಂಚನೂರು ಶಾಲೆ ಸಮೀಪದ ನಿವಾಸಿ ಕೂಲಿ ಕಾರ್ಮಿಕ ಚಿಕ್ಕ-ದುರ್ಗಿ ಕೊರಗ ದಂಪತಿ ಪುತ್ರ ದೀಕ್ಷಿತ್ ಮುಂದೆ ವಾಣಿಜ್ಯ ವಿಭಾಗದಲ್ಲಿ ಓದುವಾಸೆ ಇರುವುದಾಗಿ ತಿಳಿಸಿದ್ದಾರೆ.
ಹಾಗೂ ಬಡತನ ಓದಿಗೆ ಅಡ್ಡವಾಗುತ್ತಿದೆ ಎಂದಿರುವ ಅವರು, ’ಓದಲು ಆಸೆಯಿದೆ. 8ನೇ ತರಗತಿ ಓದುವ ತಂಗಿಯಿದ್ದು ಇಬ್ಬರು ಓದಿದರೆ ಮನೆಯವರಿಗೆ ಕಷ್ಟವಾಗುತ್ತದೆ ಎಂದಿದ್ದಾರೆ.
ಇನ್ನು ಮುದೂರಿನ ಭಾರತ ಮಾತಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಧಾಕರ- ರುದ್ರು ಕೊರಗ ದಂಪತಿ ಪುತ್ರಿ ಅಶ್ವಿನಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 502 (ಶೇ.80.32) ಅಂಕ ಪಡೆದಿದ್ದಾರೆ. ಅವರು ಮುಂದೆ ವಾಣಿಜ್ಯ ವಿಭಾಗದಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.