ಶಿರ್ವ: ಹಿಂದೂ ಶಾಲೆಗೆ ಬಸವಣ್ಣರ ಭಾವಚಿತ್ರ ಕೊಡುಗೆ
ಶಿರ್ವ, ಮೇ 10 : ಬಸವ ಜಯಂತಿ ಪ್ರಯುಕ್ತ ವಿದ್ಯಾವರ್ಧಕ ಸಂಘ ಇದರ ಆಡಳಿತಕ್ಕೆ ಒಳಪಟ್ಟ ಹಿಂದೂ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿ ರಾಮಾಂಜಿ ನಮ್ಮಭೂಮಿ ಅವರು ಬಸವಣ್ಣ ಅವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡುವ ಮೂಲ ಬಸವ ಜಯಂತಿಯನ್ನು ವಿಶಿಷ್ಟ ವಾಗಿ ಆಚರಿಸಿದರು.
ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ನಿರಂಜನ್ ಚೋಳಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ವಸಂತಿ ನಾಯ್ಕ ಅವರಿಗೆ ಬಸವಣ್ಣ ಅವರ ಭಾವಚಿತ್ರವನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಅನಂತ ಮುಡಿತ್ತಾಯ ಅವರು ಬಸವಣ್ಣ ಕುರಿತು ಮಾತನಾಡಿ, ಪ್ರಸ್ತುತ ಸಮಾಜಕ್ಕೂ ಬಸವಣ್ಣ ಅವರ ವಿಚಾರಗಳು ಅತೀ ಅಗತ್ಯ ವಾಗಿದ್ದು, ಮುಖ್ಯವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅವರ ವಿಚಾರ ಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ವೇಳೆ ರಾಮಾಂಜಿ ನಮ್ಮಭೂಮಿ ಅವರು ಮಾತನಾಡಿ, ಗಾಂಧಿ, ಅಂಬೇಡ್ಕರ್, ಬಸವಣ್ಣ, ಬುದ್ದ, ಕುವೆಂಪು ಮುಂತಾದ ದಾರ್ಶನಿಕರ ವಿಚಾರ ಧಾರೆಗಳನ್ನು ಯುವಜನತೆ ಕಡೆಗೆ ಕೊಂಡೊಯ್ಯುವ ಮೂಲಕ ಅವರಲ್ಲಿ ವೈಜ್ಞಾನಿಕ, ವೈಚಾರಿಕ ಪ್ರಜ್ಞೆ ಮೂಡಿಸಿ, ಸಮಾಜ ಮುಖಿ ಚಿಂತನೆ ಮಾಡುವಂತೆ ಮಾಡುವುದು ನನ್ನ ಉದ್ದೇಶವಾಗಿದೆ. ಅದಕ್ಕಾಗಿ ಬಸವಣ್ಣ ಅವರ ಭಾವಚಿತ್ರವನ್ನು ನಾನು ಕಲಿತ ಶಾಲೆಗೆ ನೀಡಿದ್ದೇನೆ’ ಎಂದರು.
ಈ ವೇಳೆ ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ನಿರಂಜನ್ ಚೋಳಯ್ಯ ಅವರು ಶಾಲೆಯ ಗ್ರಂಥಾಲಯಕ್ಕೆ ವಚನ ಸಾಹಿತ್ಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶಕಿಲಾ ಶೆಟ್ಟಿ, ಉಡುಪಿ ಎಂಜಿಎಂ ಪದವಿಪೂರ್ವ ಕಾಲೇಜಿನ ನಿವೃತ್ತ ವ್ಯವಸ್ಥಾಪಕ ಎಚ್.ನರಸಿಂಹ ಮೂರ್ತಿ, ಕಲಾವಿದರಾದ ಮನೋಜ್ ಕೋಟ್ಯಾನ್, ಸಜನ್, ಸವಿನ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ವೀಣಾ ಸ್ವಾಗತಿಸಿದರು. ಶಿಕ್ಷಕಿ ಸುಪ್ರಿತಾ ವಂದಿಸಿದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.
–