ಉಡುಪಿ: ಇಂದಿನಿಂದ ‘ಉಡುಪಿ ಸ್ಟೋರ್ಸ್” ಶುಭಾರಂಭ
ಉಡುಪಿ ಮೇ 10 (ಉಡುಪಿ ಟೈಮ್ಸ್ ವರದಿ):ಬನ್ನಂಜೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನೆಲ ಮಹಡಿಯಲ್ಲಿ ಇಂದು ಸಾಂಪ್ರದಾಯಿಕ ತಿಂಡಿ ತಿನಿಸುಗಳ ಹಾಗೂ ಕರಕುಶಲ ವಸ್ತುಗಳ ನೂತನ ಮಳಿಗೆ ” ಉಡುಪಿ ಸ್ಟೋರ್ಸ್” ಶುಭಾರಂಭಗೊಂಡಿದೆ.
ಈ ನೂತನ ಮಳಿಗೆಯನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಆಶಿರ್ವಚನ ನೀಡಿ, ಉಡುಪಿಯ ಆಹಾರಗಳಿಗೆ ಎಲ್ಲಾ ಕಡೆ ಪ್ರಾತಿನಿಧ್ಯತೆ, ವೇದಿಕೆ ಇದೆ. ಈ ಸಂಸ್ಥೆಯಲ್ಲಿ ಶುಚಿರುಚಿಯಾದ , ಗುಣಮಟ್ಟದ ಉಪಹಾರ ಸಿಗುವಂತಾಗಲಿ ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗ ದೊರೆಯುವಂತಾಗಲಿ ಎಂದು ಹೇಳಿ, ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಯಶ್ಪಾಲ್ ಸುವರ್ಣ ಅವರು ಮಾತನಾಡಿ, ಹೊರ ರಾಜ್ಯಗಳಿಂದ, ವಿದೇಶದಿಂದ ಬರುವವರಿಗೆ ಇಲ್ಲಿನ ಖಾದ್ಯಗಳ ಬಗ್ಗೆ ಬರೇ ಮಾಧ್ಯಮಗಳ ಮೂಲಕ ತಿಳಿಸುವುದಲ್ಲ. ಅದನ್ನು ಉನಬಡಿಸುವ ಮೂಲಕ ಉಡುಪಿಯ ಪಾಕಶೈಲಿಯ ಬಗ್ಗೆ ತಿಳಿಯಪಡಿಸಬೇಕು ಎಂದರು.
ಹಾಗೂ ಉಡುಪಿ ಜಿಲ್ಲೆಯಿಂದ ಉದ್ಯೋಗಕ್ಕಾಗಿ ಬೇರೆ ಊರು, ರಾಜ್ಯಗಳಿಗೆ ಇಲ್ಲಿನ ಯುವಕರು ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಇಲ್ಲಿನ ಯುವಕರಿಗೆ ಇಲ್ಲಿಯೇ ಉದ್ಯೋಗ ಕಲ್ಪಿಸಿ ಕೊಟ್ಟಿದಕ್ಕಾಗಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ಈ ಸಂಸ್ಥೆಯ ಮೂಲಕ ಇನ್ನಷ್ಟು ಉದ್ಯೋಗ ಸೃಷ್ಟಿ ಆಗಲಿ ಎಂದು ಸಂಸ್ಥೆಯ ಯಶಸ್ಸಿಗೆ ಶುಭ ಹಾರೈಸಿದರು.
ಸಂಸ್ಥೆಯ ಪಾಲುದಾರರಾದ ಶ್ರೀಧರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಸ್ಥೆಯ ಮುಖ್ಯಸ್ಥರಾದ ದಿವಾಕರ್ ಸನಿಲ್ ಸ್ವಾಗತಿಸಿದರು.
ವಿಶ್ವನಾಥ್ ಕುಲಾಲ್ ರಾಘವೇಂದ್ರ, ಶಿವರಾಮ ನಾಯಕ್ ಉಪಸ್ಥಿತರಿದ್ದರು