50 ವರ್ಷದ ಕಾಂಗ್ರೆಸ್’ನ ಕೆಟ್ಟ ಆಡಳಿತವನ್ನು ಈಗ ಅನುಭವಿಸುತ್ತಿದ್ದೇವೆ: ಶೋಭಾ ಕರಂದ್ಲಾಜೆ

ಉಡುಪಿ ಮೇ.5( ಉಡುಪಿ ಟೈಮ್ಸ್ ವರದಿ): ಮುಖ್ಯ ಮಂತ್ರಿಗಳ ರಾಜೀನಾಮೆ ಕೇಳುವುದು ಕೋವಿಡ್ ನಿರ್ವಹಣೆಗೆ ಪರಿಹಾರವಲ್ಲ, ಸರಕಾರಕ್ಕೆ ಸಲಹೆ ಕೊಡಿ ಅಧಿಕಾರಿಗಳ ಸಭೆ ಕರೆಯಿರಿ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕ. ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ವಿರೋಧಪಕ್ಷಕ್ಕೂ ಅಷ್ಟೆ ಜವಾಬ್ದಾರಿ ಇದೆ. ಮುಖ್ಯ ಮಂತ್ರಿಗಳ ರಾಜೀನಾಮೆ ಕೇಳುವುದು ಪರಿಹಾರ ಅಲ್ಲ, ಸರಕಾರಕ್ಕೆ ಸಲಹೆ ಕೊಡಿ ಅಧಿಕಾರಿಗಳ ಸಭೆ ಕರೆಯಿರಿ. ಸಿದ್ದರಾಮಯ್ಯ ರಾಜ್ಯದಲ್ಲಿ ಐದು ವರ್ಷ ಆಳ್ವಿಕೆ ಮಾಡಿದ್ದಾರೆ 50 ವರ್ಷದ ಕಾಂಗ್ರೆಸ್ ಕೆಟ್ಟ ಆಡಳಿತವನ್ನು ಈಗ ಅನುಭವಿಸುತ್ತಿದ್ದೇವೆ ಎಂದರು. ಮಾತು ಮುಂದುವರೆಸಿದ ಅವರು ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿ ಆಸ್ಪತ್ರೆಗಳನ್ನು ಬೆಳೆಸಿಲ್ಲ. ರಾಜಕೀಯ ಮಾತನಾಡುವುದಿಲ್ಲ ಎಲ್ಲರೂ ಒಟ್ಟು ಸೇರಿ ಕೊರೋನಾ ಎದುರಿಸೋಣ ಎಂದಿದ್ದಾರೆ.

ಇನ್ನು ಕುಂದಾಪುರ ಹರೀಶ್ ಬಂಗೇರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಸೌದಿ ಜೈಲಿನಲ್ಲಿ ಸಿಲುಕಿಕೊಂಡಿರುವ ಹರೀಶ್ ಬಂಗೇರ ಅವರನ್ನು ನಾವು ಮರೆತಿಲ್ಲ. ವಿದೇಶದ ಪ್ರಕರಣ ಆಗಿರುವುದರಿಂದ ಅವರನ್ನು ಬಂಧಮುಕ್ತ ಮಾಡುವುದು ಕಷ್ಟವಾಗುತ್ತಿದೆ. ಸೌದಿ ಸರಕಾರ ಭಾರತೀಯ ಎಂಬಸಿಗೆ ಯಾವುದೇ ಸಹಕಾರ ಕೊಡುತ್ತಿಲ್ಲ ಎಂದ ಅವರು, ಹರೀಶ್ ಬಂಗೇರ ಅನಾವಶ್ಯಕವಾದ ಆರೋಪವನ್ನು ಎದುರಿಸುತ್ತಿದ್ದಾರೆ. ಘಟನೆಯ ಬಗ್ಗೆ ನನಗೆ ಬಹಳ ದುಃಖ ಇದೆ. ಸಂಸತ್ತಿನಲ್ಲಿ ಪ್ರತಿಬಾರಿ ವಿದೇಶಾಂಗ ಸಚಿವರು, ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದೇನೆ. ಅಲ್ಲದೆ ಸೌದಿ ಸರ್ಕಾರವನ್ನ ಮನವೊಲಿಸುವ ಪ್ರಯತ್ನವೂ ಮುಂದುವರಿದಿದೆ. ಕೊರೋನಾ ಸಂಕಷ್ಟ ಮುಗಿದ ಕೂಡಲೇ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!