ಮಣಿಪಾಲ: ಕೆಎಂಸಿಯಲ್ಲಿ ಸಮಗ್ರ ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ
ಮಣಿಪಾಲ, ಮೇ 8(ಉಡುಪಿ ಟೈಮ್ಸ್ ವರದಿ): ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಮಗ್ರ ಥಲಸ್ಸೆಮಿಯಾ ಕ್ಲಿನಿಕ್ ಅನ್ನು ಪ್ರಾರಂಭಿಸುವುದರೊಂದಿಗೆ ಅಂತರರಾಷ್ಟ್ರೀಯ ಥಲಸ್ಸೇಮಿಯಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ವೀಣಾ ಕುಮಾರಿ ಅವರು ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ “ಥಲಸ್ಸೆಮಿಯಾ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆ ಮತ್ತು ಚಿಕಿತ್ಸೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮತ್ತು ಅದನ್ನು ಪಡೆಯಲು ಅವರು ಅರ್ಹರು ” ಎಂದು ತಿಳಿಸಿದರು. ಥಲಸ್ಸೆಮಿಯಾದಂತಹ ಕಾಯಿಲೆಗಳಿಗೆ ಸಾರ್ವಜನಿಕ ( ಸರ್ಕಾರಿ) ಖಾಸಗಿ ಸಹಭಾಗಿತ್ವದ ಮಾದರಿಯ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಕೆ.ಎಂ.ಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ ಅವರು ಮಾತನಾಡಿ, “ಬಹಳಷ್ಟು ಸಂಘ ಸಂಸ್ಥೆಗಳ ಬೆಂಬಲವು ಕೆಎಂಸಿಯಲ್ಲಿ ಬಡ ಮಕ್ಕಳಿಗೆ ಮೂಳೆ ಮಜ್ಜೆಯ ಕಸಿ ಮಾಡಲು ಅನುವು ಮಾಡಿಕೊಟ್ಟಿದೆ” ಎಂದು ಉಲ್ಲೇಖಿಸಿದರು . ಥಲಸ್ಸೆಮಿಯಾ ಕುರಿತು ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಿದ ಅವರು “ರೋಗದ ವಿವರವಾದ ಮಾಹಿತಿಯನ್ನು ಆರೈಕೆ ಮಾಡುವವರಿಗೆ ಅವರಿಗೆ ಉತ್ತಮವಾಗಿ ಅರ್ಥವಾಗುವ ಭಾಷೆಯಲ್ಲಿ ನೀಡಬೇಕು” ಎಂದು ಹೇಳಿದರು.
ಮಣಿಪಾಲದ ಕೆಎಂಸಿಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ವಾಸುದೇವ ಭಟ್ ಕೆ ಅವರು ಮಾತನಾಡಿ, “ಈ ಕ್ಲಿನಿಕ್ ಅನ್ನು ಪ್ರಾರಂಭಿಸಲು ಅಂತರರಾಷ್ಟ್ರೀಯ ಥಲಸ್ಸೆಮಿಯಾ ದಿನಕ್ಕಿಂತ ಉತ್ತಮ ದಿನ ಬೇರೊಂದಿಲ್ಲ ಮತ್ತು ನಮ್ಮ ದೃಷ್ಟಿ ಈ ವರ್ಷದ ಥೀಮ್‌ಗೆ ಹೊಂದಿಕೆಯಾಗುತ್ತದೆ” ಎಂದು ಹೇಳಿದರು.
ಈ ವೇಳೆ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಅರ್ಚನಾ ಎಂ.ವಿ ಸಮಗ್ರ ಥಲಸ್ಸೆಮಿಯಾ ಚಿಕಿತ್ಸಾಲಯ ಮತ್ತು ಅದರ ಕಾರ್ಯನಿರ್ವಹಣೆಯ ಅವಲೋಕನವನ್ನು ನೀಡಿದರು. ಹಾಗೂ ಈ ಚಿಕಿತ್ಸಾಲಯವು ಪ್ರತಿ ತಿಂಗಳ 2ನೇ ಶನಿವಾರದಂದು ಕಾರ್ಯನಿರ್ವಹಿಸಲಿದ್ದು, ಉಡುಪಿ ಮತ್ತು ನೆರೆಯ ಜಿಲ್ಲೆಗಳ ರೋಗಿಗಳಿಗೆ ಸೇವೆ ಒದಗಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ರೋಗಿಗಳಿಗೆ ಸಹಾಯ ಧನ ಈ ಸಂದರ್ಭದಲ್ಲಿ ವಿತರಿಸಲಾಯಿತು. ಉಪ ವೈದ್ಯಕೀಯ ಅಧೀಕ್ಷಕ ಡಾ.ಶಿರನ್ ಶೆಟ್ಟಿ ವಂದಿಸಿದರು. ಔಪಚಾರಿಕ ಕಾರ್ಯಕ್ರಮದ ನಂತರ ಆರೈಕೆದಾರರು ಮತ್ತು ದಾದಿಯರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಡಾ.ಸ್ವಾತಿ ಪಿ.ಎಂ ಕಾರ್ಯಕ್ರಮ ನಿರ್ವಹಿಸಿದರು.