ಏನೇ ಆಪತ್ತು ಬಂದರೂ ತುಳುನಾಡಿನ ದೈವದೇವರು ನಮ್ಮ ಕೈ ಬಿಡುವುದಿಲ್ಲ – ಪಲಿಮಾರು ಸ್ವಾಮೀಜಿ
ಪಲಿಮಾರು ಮೇ 05 (ಉಡುಪಿ ಟೈಮ್ಸ್ ವರದಿ): ಏನೇ ಆಪತ್ತು ಬಂದರೂ ತುಳುನಾಡಿನ ದೈವದೇವರು ನಮ್ಮ ಕೈ ಬಿಡುವುದಿಲ್ಲ ಎಂದು ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಪಲಿಮಾರು ಸಾಲ್ಯಾನ್ ಆದಿಮೂಲಸ್ಥಾನದ ಧರ್ಮ ದೈವಗಳ ನೂತನ ಶಿಲಾಮಯ ಆರೂಢದ ಪುನಪ್ರತಿಷ್ಠೆ- ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು,
ನಮ್ಮ ನಾಡಿನ ದೈವದೇವರ ಸಾನ್ನಿಧ್ಯಗಳು ವೃದ್ಧಿಯಾದಲ್ಲಿ ಮನುಷ್ಯಕುಲದ ಅಭಿವೃದ್ಧಿ ಸಾಧ್ಯ. ದೇವರಿಗೆ ಕೊಟ್ಟದ್ದನ್ನು ದೇವರು ನಮಗೇ ಮರಳಿ ಕೊಡುತ್ತಾನೆ. ನಾವು ನಂಬಿದರೆ ತುಳುನಾಡಿನ ದೈವದೇವರುಗಳು ಏನೇ ಆಪತ್ತು ಬಂದರೂ ನಮ್ಮ ಕೈಬಿಡುವುದಿಲ್ಲ ತಿಳಿಸಿದ್ದಾರೆ.
ಸಕಾಲಕ್ಕೆ ಮಳೆಯಿಲ್ಲ, ನೀರಿಲ್ಲ, ಆದರೆ ಏಕೆ ಇಲ್ಲ ಎಂಬುದನ್ನು ಆಲೋಚಿಸುತ್ತಿಲ್ಲ. ಕಾಲಕಾಲಕ್ಕೆ ಮಳೆ,ಬೆಳೆಯನ್ನು ದೇವರು ಕೊಟ್ಟರೆ ಮಾತ್ರ ಸಮೃದ್ಧ ಬಾಳ್ವೆ ನಡೆಸಲು ಸಾಧ್ಯ ಎಂದವರು ಅಭಿಪ್ರಾಯ ಪಟ್ಟರು.
ಈ ವೇಳೆ ತುಳು ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ಮಾತನಾಡಿ, ತುಳುನಾಡಿನ ದೈವಾರಾಧನೆ, ನಾಗಾರಾಧನೆಗಳು ಬರೀ ನಂಬಿಕೆಗಳಾಗಿರದೆ ತುಳುವರ ಬದುಕಿನೊಂದಿಗೆ ಸಮ್ಮಿಳಿತವಾಗಿದೆ ಎಂದರೆ ತಪ್ಪಾಗಲಾರದು. ಪ್ರತೀ ಮನೆಯ ಚಾವಡಿಯಲ್ಲಿ ಒಂದಲ್ಲಾ ಒಂದು ದೈವಗಳು ತುಳುವರಿಗೆ ಸದಾ ಶ್ರೀರಕ್ಷೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಶಿಲ್ಪಿ ಜಗದೀಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಸಫಲಿಗ, ಸದಾನಂದ ಸಾಲ್ಯಾನ್ ಶಿರ್ವ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಧೇಶ್ವರ ಸ್ವಾಮೀಜಿ, ಮೂಲಸ್ಥಾನದ ಅನುವಂಶಿಕ ಅರ್ಚಕ ಪಿ.ಆರ್.ಶ್ರೀನಿವಾಸ ಉಡುಪ, ಮೂಲಸ್ಥಾನದ ಮುಂಬಯಿ ಸಮಿತಿ ಅಧ್ಯಕ್ಷ ಸುರೇಂದ್ರ ಸಾಲಿಯಾನ್ ಮುಂಡ್ಕೂರು,ಮುಂಬಯಿ ಉದ್ಯಮಿ ಶೇಖರ ಶೇರಿಗಾರ್,ಸುಂದರ್ ಶೇರಿಗಾರ್ ಶಿಬರೂರು, ಸುರೇಂದ್ರ ಸಾಲ್ಯಾನ್ ಬೆಂಗ್ರೆ, ಹೇಮಚಂದ್ರ ಸಾಲ್ಯಾನ್ ಕಾಡಿಪಟ್ಣ, ಮಹಿಳಾ ಸಮಿತಿ ಅಧ್ಯಕ್ಷೆ ಮೋಹಿನಿ ಎಸ್ ಪುತ್ರನ್ ಮಂಗಳೂರು, ಮುಂಬಯಿ ಸಮಿತಿ ಅಧ್ಯಕ್ಷೆ ಜಯಂತಿ ಕೋಟ್ಯಾನ್, ಸಂದೀಪ್ ಸಾಲ್ಯಾನ್, ಯೋಗೀಶ್ ಸಾಲ್ಯಾನ್, ತೇಜ್ ಪಾಲ್ ಸಾಲ್ಯಾನ್, ಪುಷ್ಪರಾಜ್ ಸಾಲ್ಯಾನ್ ಎರ್ಮಾಳ್, ಹರಿಕೃಷ್ಣ ಸಾಲ್ಯಾನ್, ಪಲಿಮಾರು ಸಾಲ್ಯಾನ್ ಆದಿ ಮೂಲಸ್ಥಾನದ ಅಧ್ಯಕ್ಷ ಸದಾಶಿವ ಪಡುಬಿದ್ರಿ, ಪ್ರಕಾಶ್ ಸಾಲಿಯಾನ್ ಉಪಸ್ಥಿತರಿದ್ದರು.