ಉಡುಪಿ: ಮೇ. 6 – “ಹೊಸ ಬೆಳಕು” ಆಶ್ರಮ ಲೋಕಾರ್ಪಣೆ
ಉಡುಪಿ ಮೇ 4 : ಹೊಸಬೆಳಕು ಸೇವಾ ಟ್ರಸ್ಟ್ ‘ಹೊಸಬೆಳಕು’ ಆಶ್ರಮದ ನೂತನ ಕಟ್ಟಡವು ಮೇ 6 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಆಶ್ರಮದ ಸಂಸ್ಥಾಪಕರಾದ ವಿನಯ್‌ಚಂದ್ರ ಸಾಸ್ತಾನ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮೇ 6ರ ಸೋಮವಾರ ಬೆಳಗ್ಗೆ 10ಗಂಟೆಗೆ ಆಶ್ರಮವಾಸಿಗಳೇ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಹೊಸ ಬೆಳಕು ಸಂಸ್ಥೆ 2014ರಲ್ಲಿ ನಿರ್ಗತಿಕರು, ನಿರಾಶ್ರಿತರು, ನೊಂದ ಹಿರಿಯರಿಗಾಗಿ ಮಣಿಪಾಲದಲ್ಲಿ ಉಚಿತ ಆಶ್ರಮವನ್ನು ಪ್ರಾರಂಭಿಸಿದ್ದು, ಇದೀಗ ಕಾರ್ಕಳ, ಬೈಲೂರಿನ ಕೌಡೂರು ಗ್ರಾಮದ ಮಾಣಿಕುಮೇರಿಯಲ್ಲಿ ನಿರ್ಮಿಸುತ್ತಿರುವ ಸ್ವಂತ ಕಟ್ಟಡಕ್ಕೆ ಹಸ್ತಾಂತರಿಸಲಾಗುವುದು ಎಂದರು. ಇದೀಗ ಆಶ್ರಮದಲ್ಲಿ 180 ಮಂದಿ ಆಶ್ರಯ ಪಡೆದಿದ್ದಾರೆ. ಆಶ್ರಮಕ್ಕೆ ಸೇರಿ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಕುಟುಂಬದ ಗುರುತು ಪತ್ತೆಯಾದ 66 ಮಂದಿ ಮರಳಿ ಮನೆ ಸೇರಿದ್ದಾರೆ. ಕುಟುಂಬಿಕರು ಯಾರೂ ಇಲ್ಲದವರಿಗೆ ಮಾತ್ರ ಇಲ್ಲಿ ಆಶ್ರಯ ನೀಡಲಾಗು ತ್ತಿದೆ. ದಾನಿಗಳ ನೆರವಿನಿಂದ ಅವರಿಗೆ ಉಚಿತ ಊಟ-ವಸತಿ ಸೌಲಭ್ಯ ನೀಡಲಾಗುತ್ತದೆ. ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಚಿಕಿತ್ಸೆಯನ್ನೂ ನೀಡಲಾಗುತ್ತದೆ ಎಂದರು.
ರವಿಪಾಣಾರ ಅವರು ತನ್ನ ತಂದೆ ಡಂಗು ಪಾಣಾರ ನೆನಪಿನಲ್ಲಿ ಕೌಡೂರು ಗ್ರಾಮದಲ್ಲಿ ದಾನವಾಗಿ ನೀಡಿದ 59 ಸೆನ್ಸ್ ಸೇರಿದಂತೆ ಒಟ್ಟು 1.14 ಎಕರೆ ಜಾಗದಲ್ಲಿ ಸುಮಾರು 2.62 ಕೋಟಿ ರೂ.ಅಂದಾಜು ವೆಟ್ಟದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಇದು ಪೂರ್ಣಗೊಂಡಾಗ 300ರಿಂದ 400 ಮಂದಿಗೆ ಉಚಿತ ಆಶ್ರಯ ನೀಡಿ ಅವರ ಬಾಳಿಗೆ ಹೊಸ ಬದುಕು ನೀಡಲಿದೆ ಎಂದು ವಿನಯಚಂದ್ರ ತಿಳಿಸಿದರು.
ಆಶ್ರಮವನ್ನು ನಡೆಸಲು ತಿಂಗಳಿಗೆ 2ರಿಂದ 3ಲಕ್ಷ ರೂ.ವವೆಚ್ಚ ಬರುತ್ತದೆ. ಆಶ್ರಮವಾಸಿಗಳ ವೈದ್ಯಕೀಯ ಖರ್ಚು 80,000ರೂ.ಗಳಿಗೂ ಅಧಿಕ ಬರುತ್ತದೆ. ಇವುಗಳನ್ನು ಕೇವಲ ದಾನಿಗಳ ನೆರವಿನಿಂದ ನಿಭಾಯಿಸುತಿದ್ದೇವೆ. ನೂತನ ಕಟ್ಟಡದಲ್ಲಿ ಅವರಿಗೆ ಬೇಕಾದ ವಿವಿಧ ಸೌಕರ್ಯದೊಂದಿಗೆ ಜಿಮ್, ಪಾರ್ಕ್, ಪಂಚಾಯತ್ ಕಟ್ಟೆ, ಫಿಸಿಯೋಥೆರಪಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಕಟ್ಟಡ ಕಾಮಗಾರಿ ಮುಗಿಯಲು ಇನ್ನೂ ಒಂದು ಕೋಟಿ ರೂ.ಗಳ ಅಗತ್ಯವಿದೆ. ಜೊತೆಗೆ ಈಗಿರುವ 180 ಮಂದಿಯ ಬದುಕಿಗೆ ಹೊಸ ಬೆಳಕು ನೀಡಲು ದಾನಿಗಳಿಂದ ನೆರವನ್ನು ನಾವು ನಿರೀಕ್ಷಿಸುತಿದ್ದೇವೆ ಎಂದು ಅವರು ಇದೇ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ತನುಲಾ ತರುಣ್ ಉಪಸ್ಥಿತರಿದ್ದರು.