ಮಹಿಳೆಯರ ಅತ್ಯಾಚಾರ ಹಾಗೂ ವಿಡಿಯೋ ಚಿತ್ರೀಕರಣ-ಸಂಸದ ಪ್ರಜ್ವಲ್ ವಿರುದ್ಧ ಮಹಿಳಾ ಕಾಂಗ್ರೆಸ್ ಖಂಡನೆ
ಉಡುಪಿ ಮೇ.3(ಉಡುಪಿ ಟೈಮ್ಸ್ ವರದಿ): ದೇಶದೆಲ್ಲೆಡೆ ಭಾರೀ ಸುದ್ದಿಯಲ್ಲಿರುವ ಪ್ರಜ್ವಲ್ ರೇವಣ್ಣರ ರಾಸಲೀಲೆಗಳ ಪೆನ್‌ಡ್ರೈವ್ ಪ್ರಕರಣವನ್ನು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಖಂಡಿಸಿದೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ ಅವರು, ರಾಜ್ಯ ಸರ್ಕಾರ ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಶಿಕ್ಷೆಗೆ ಒಳಪಡಿಸಬೇಕು, ಮಾತ್ರವಲ್ಲ, ತನ್ನ ಗುಟ್ಟು ಬಯಲಾದ ತಕ್ಷಣ ಜರ್ಮನಿಗೆ ಪಲಾಯನಗೈದಿರುವ ಆತನನ್ನು ತಕ್ಷಣ ಭಾರತಕ್ಕೆ ಬರುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿದೆ. ಹಾಗೂ ಯಾವುದೇ ಕಾರಣಕ್ಕೂ ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಾಗಬಾರದು. ಆತನಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸೂಕ್ತವಾದ ನ್ಯಾಯ, ಸಿಗುವಂತಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ
ಹಾಗೂ ಉಡುಪಿ ಜಿಲ್ಲಾ, ಮಹಿಳಾ ಕಾಂಗ್ರೆಸ್ ಈ ಘಟನೆಯನ್ನು ಬಲವಾಗಿ ಪ್ರತಿಭಟಿಸುತ್ತದೆ ಎಂದ ಅವರು, ಇಷ್ಟು ದೊಡ್ಡ ಹಗರಣ ನಡೆದ ಮೇಲೂ ಬಿಜೆಪಿ ಪಕ್ಷವು ಜೆಡಿಎಸ್ ಪಕ್ಷವನ್ನು ಇನ್ನೂ ಮೈತ್ರಿ ಯೊಂದಿಗೆ ಆಲಂಗಿಸಿಕೊಂಡು ಮುಂದುವರಿಯಲಿದೆಯೇ? ದೇಶವನ್ನೇ ತಲ್ಲಣ ಗೊಳಿಸಿದ ಈ ಹಗರಣವು ತಮ್ಮ ಪಕ್ಷದ ಮೇಲೆ ಏನೂ ಪರಿಣಾಮ ಬೀರಿಲ್ಲವೇ? ಎಂದು ಪ್ರಧಾನ ಮಂತ್ರಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗೆ ಕೆಲವು ದಿನಗಳಿಂದ ದೇಶದೆಲ್ಲೆಡೆ ಹರಡಿರುವ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆಗಳನ್ನು ಸಾರುವ ಪೆನ್ ಡ್ರೈವ್ ಸುದ್ದಿ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಭಾರತದ ಮಾಜಿ ಪ್ರಧಾನಿಯೊಬ್ಬರ ಮೊಮ್ಮಗ, ಮಾಜಿ ಮುಖ್ಯಮಂತ್ರಿಯೊಬ್ಬರ ಅಣ್ಣನ ಮಗ, ಮಾಜಿ ಸಚಿವರೊಬ್ಬರ ಮಗ, ಅಷ್ಟೇ ಅಲ್ಲ, ಸ್ವತಃ ಒಬ್ಬ ಸಂಸದನಾಗಿರುವ ಪ್ರಜ್ವಲ್ ರೇವಣ್ಣ, ತಾನು ಏನು ಮಾಡಿದರೂ ನಡೆಯುತ್ತೆ, ತನ್ನನ್ನು ಯಾರೂ ಏನೂ ಮಾಡಲಾರರು ಎನ್ನುವ ಅಹಂಕಾರದಿಂದ ನೂರಾರು ಸ್ತ್ರೀಯರ ಶೀಲಹರಣ ಮಾಡಿರುವ ವಿಚಾರ ನಮ್ಮ ದೇಶದಲ್ಲಿ ಸಂವಿಧಾನ ಇನ್ನೂ ಇದೆಯಾ ಎನ್ನುವ ಅನುಮಾನ ಮೂಡಿಸುತ್ತದೆ, ಮೋದಿ ಪರಿವಾರದೊಂದಿಗೆ ಗುರುತಿಸಿಕೊಂಡಿರುವ ಈ ಚಂಡಾಲನಿಗೆ ಇದೀಗ ಮೋದಿಯವರ ಅಭಯವೂ ಸಿಕ್ಕಿರಬಹುದೆನ್ನುವ ಗುಮಾನಿ ಹುಟ್ಟಿಕೊಂಡಿದೆ ಎಂದು ತಿಳಿಸಿದ್ದಾರೆ.
ಪ್ರಜ್ವಲ್ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಹಾಸನದ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದರೂ ಬಿಜೆಪಿ ಪಕ್ಷವು ಜೆಡಿಎಸ್ ನೊಂದಿಗಿನ ಮೈತ್ರಿಯನ್ನು ಉಳಿಸಿಕೊಳ್ಳಲು ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸದೇ ಸುಮ್ಮನಿದ್ದುದು ನಮ್ಮ ಗುಮಾನಿಗೆ ಪುಷ್ಟಿ ನೀಡಿದೆ. ಇಂತಹ ಒಂದು ಕೃತ್ಯವು ಅನ್ಯಕೋಮಿನವರಿಂದ ನಡೆದಿದ್ದರೆ ಕರ್ನಾಟಕ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲಿ ಬಿಜೆಪಿ ತನ್ನ ಉಗ್ರ ಸ್ವರೂಪವನ್ನು ತೋರಿಸುತ್ತಿತ್ತು, ಇತ್ತೀಚಿಗೆ ನಡೆದ ನೇಹಾ ಕೊಲೆ ಪ್ರಕರಣವೇ ಇದಕ್ಕೆ ಸಾಕ್ಷಿ. ಮೋದಿ, ಅಮಿತ್ ಷಾ ಆದಿಯಾಗಿ ಬಿಜೆಪಿಯ ಎಲ್ಲಾ ನಾಯಕರೂ ಈ ಪ್ರಕರಣವನ್ನು ಎಳೆದು ತರುವ ಪ್ರಯತ್ನವನ್ನು ಮಾಡಿದ್ದರು. ಲೋಕಸಭಾ ಚುನಾವಣೆಗೆ ನೇಹಾ ಪ್ರಕರಣ ಒಂದು ಅಸ್ತ್ರವಾಗಿತ್ತು. ಆದರೆ ಇದೀಗ ಬಯಲಿಗೆ ಬಂದಿರುವ ಪ್ರಜ್ವಲ್ ರೇವಣ್ಣ ಅವರ ಈ ಲೈಂಗಿಕ ಹಗರಣದ ಬಗ್ಗೆ ಬಿಜೆಪಿಯ ಯಾವ ನಾಯಕರೂ ಚಕಾರವೆತ್ತುತ್ತಿಲ್ಲ… ನೇಹಾ ಕೊಲೆ ನಿಜಕ್ಕೂ ಖಂಡನೀಯ, ಆಕೆಯ ದಾರುಣ ಹತ್ಯೆಗೆ ಕಾರಣನಾದ ಆರೋಪಿಗೆ ಕಠೋರ ಶಿಕ್ಷೆಯಾಗಲೇ ಬೇಕು ಎನ್ನುವುದು ನಮ್ಮ ಆಶಯ. ಆರೋಪಿ ಯಾವುದೇ ಧರ್ಮದವನಿರಲಿ, ಆತನ ಪರವಹಿಸುವ ಯಾವುದೇ ಮಾತಿಲ್ಲ…ಆದರೆ ಪುಜ್ವಲ್ ರೇವಣ್ಣ ಎಸಗಿದ ಕೃತ್ಯ ಅತ್ಯಂತ ಕ್ರೂರ ಹಾಗೂ ಅಮಾನವೀಯ ವಯಸ್ಸಿನ ನಿರ್ಬಂಧವಿಲ್ಲದೇ ನೂರಾರು ಮಹಿಳೆಯರನ್ನು ತನ್ನ ಕಾಮತೃಷೆಗೆ ಉಪಯೋಗಿಸಿಕೊಂಡಿದ್ದು ಸಾಲದೇ ತಾನೇನೋ ಘನಂದಾರಿ ಕಾರ್ಯ ಮಾಡುತ್ತಿದ್ದೇನೆ ಎನ್ನುವಂತೆ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡಿದ್ದು ಆ ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡುವ ಅಪಾಯಕಾರಿ ಚಿಂತನೆಯನ್ನು ಹೊಂದಿದ್ದನ್ನು ಗಮನಿಸಿದರೆ ಆತನೆಂತಹಾ ಕ್ರೂರಿ ಎನ್ನುವುದನ್ನು ತೋರಿಸುತ್ತದೆ.
ಇಂತಹ ಘೋರ ಕೃತ್ಯವನ್ನು ಬಿಜೆಪಿ ಯಾಕೆ ಖಂಡಿಸುತ್ತಿಲ್ಲ..? ಆತನ ಕುಕೃತ್ಯಕ್ಕೆ ಬಲಿಯಾದ ಹೆಣ್ಣು ಮಕ್ಕಳ ಬಗ್ಗೆ, ನಮಗೆ ಬಹಳ ಸಹಾನುಭೂತಿ ಇದೆ. ಒಂದಲ ಒಂದು ರೀತಿಯ ಸಹಾಯ ಕೇಳಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಿದ್ದ ಆತನ ಲೋಲುಪತೆ ಅಸಹ್ಯ ತರಿಸುವಂತಾಹುದು, ಬಿಜೆಪಿಯ ಮಹಿಳಾ ಮೋರ್ಚಾ ಏನು ಮಾಡುತ್ತಿದೆ? ಶೌಚಾಲಯದಲ್ಲಿ ಕ್ಯಾಮೆರಾ ವಿಷಯವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿ ದೊಡ್ಡದಾಗಿ ಪ್ರತಿಭಟಿಸಿ, ಮುಸ್ಲೀಮರನ್ನು ಗಡೀಪಾರುಮಾಡಬೇಕು, ಕಾಲೇಜುಗಳಲ್ಲಿ ಮುಸ್ಲಿಮರನ್ನು ಸೇರಿಸಿಕೊಳ್ಳಬಾರದು ಎಂದೆಲ್ಲಾ ಆರ್ಭಟಿಸಿದ್ದ ಈ ಮಹಿಳೆಯರಿಗೆ ಪ್ರಜ್ವಲ್ ಎಸಗಿದ್ದ ಕೃತ್ಯ ಒಂದು ಸಾಮಾನ್ಯ ವಿಷಯವಾಗಿ ಕಂಡಿತೇ? ದೌರ್ಜನ್ಯಕ್ಕೊಳಗಾದ ಆ ಮಹಿಳೆಯರ ಬಗ್ಗೆ, ಈ ಮಹಿಳೆಯರ ಹೃದಯದಲ್ಲಿ ಒಂದಿನಿತೂ ಭಾವನೆಗಳು ಮೂಡುತ್ತಿಲ್ಲವೇ?ತೆನೆ ಹೊತ್ತ ಮಹಿಳೆ ಯನ್ನು ಜೆಡಿಎಸ್ ತನ್ನ ಪಕ್ಷದ ಚುನಾವಣಾ ಚಿಹ್ನೆಯನ್ನಾಗಿಸಿಕೊಂಡಿದ್ದು, ಇದೀಗ ಅದೇ ಪಕ್ಷದ ಸಂಸದನೊಬ್ಬ ಮಹಿಳೆಯರನ್ನು ತನ್ನ ಭೋಗದ ವಸ್ತುವನ್ನಾಗಿಸಿರುವುದು ಬಹು ದೊಡ್ಡ ದುರಂತ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ, ಅಮೃತಾ ಕೃಷ್ಣ ಮೂರ್ತಿ, ಜ್ಯೋತಿ ಹೆಬ್ಬಾರ್, ಮಮತಾ ಶೆಟ್ಟಿ ಉಪಸ್ಥಿತರಿದ್ದರು.