ಕುಂದಾಪುರ: ಮೇ.1-2 ಸಾಂಸ್ಕೃತಿಕ, ತಾಂತ್ರಿಕ ಮತ್ತು ಮ್ಯಾನೇಜ್ಮೆಂಟ್ ಸ್ಪರ್ಧಾಕೂಟ ‘ಸಾವಿಷ್ಕಾರ್’
ಕುಂದಾಪುರ ಏ.30 (ಉಡುಪಿ ಟೈಮ್ಸ್ ವರದಿ): ಇಲ್ಲಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ಮೇ 1 ಮತ್ತು 2 ರಂದು ರಾಜ್ಯಮಟ್ಟದ ಎರಡು ದಿನಗಳ ಸಾಂಸ್ಕೃತಿಕ, ತಾಂತ್ರಿಕ ಮತ್ತು ಮ್ಯಾನೇಜ್ಮೆಂಟ್ ಸ್ಪರ್ಧಾಕೂಟ ಸಾವಿಷ್ಕಾರ್ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಒಂದು ಕಾರ್ಯಕ್ರಮದಲ್ಲಿ 20 ಕ್ಕೂ ಅಧಿಕ ಅಧಿಕ ಸ್ಪರ್ಧೆಗಳು ನಡೆಯಲಿದ್ದು ಸುಮಾರು 30 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕೌಶಲ್ಯಥೆಯನ್ನು ತೋರಿಸಲಿದ್ದಾರೆ. ಎಲ್ಲಾ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನದ ಜೊತೆಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಕಾರ್ಯಕ್ರಮದ ರಂಗು ಏರಿಸಲು ಎರಡೂ ದಿನ, ಪ್ರಮುಖ ಆಕರ್ಷಣೆಯಾಗಿ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಪ್ರಯುಕ್ತ ಮೊದಲ ದಿನ ಸಂಜೆಗೆ ಕನ್ನಡ ಸಂಗೀತ ಕ್ಷೇತ್ರದಲ್ಲಿ ರಾಪ್ ಮಾದರಿಯ ಗೀತೆಗಳನ್ನು ಪರಿಚಯಿಸಿದ ಹೆಸರಾಂತ ರಾಪರ್ ಮತ್ತು ಬಿಗ್ ಬಾಸ್ ವಿಜೇತರಾದ ಚಂದನ್ ಶೆಟ್ಟಿ ಅವರು ಸಂಗೀತ ಕಾರ್ಯಕ್ರಮ ನೀಡಲು ಆಗಮಿಸಲಿದ್ದಾರೆ. ಹಾಗೆಯೇ ರಿಯಾಲಿಟಿ ಶೋ ನಲ್ಲಿ ಹೆಸರು ಗಳಿಸಿದ ಗಾಯಕಿ ಶಶಿಕಲಾ ಸುನಿಲ್ ಮತ್ತು ಗಾಯಕ ಧನುಷ್ ಅವರ ಸಂಗೀತಾ ಕಾರ್ಯಕ್ರಮ ನಡೆಯಲಿದೆ.
ಎರಡನೇ ದಿನದ ಪ್ರಮುಖ ಆಕರ್ಷಣೆಯಾಗಿ, ಸ್ಯಾಂಡಲ್ ವುಡ್ ನ ಮತ್ತೊಬ್ಬ ಪ್ರಸಿದ್ಧ ಗಾಯಕ, ತನ್ನ ಜಾನಪದ ಶೈಲಿಯಲ್ಲಿ ಹಾಡಿ ಪ್ರಸಿದ್ದಿ ಪಡೆದಿರುವ ನವೀನ್ ಸಜ್ಜು ಅವರು ತಮ್ಮ ಬ್ಯಾಂಡ್ ನೊಂದಿಗೆ ಅದ್ದೂರಿ ಕಾರ್ಯಕ್ರಮ ನೀಡಲಿದ್ದಾರೆ. ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು ಅವರ ಕಾರ್ಯಕ್ರಮ ಉಡುಪಿಯಲ್ಲೇ ಮೊದಲ ಬಾರಿ ನಡೆಯಲಿದ್ದು, ಬಹು ದೊಡ್ಡ ಆಕರ್ಷಣೆಯಾಗಲಿದೆ. ಹಾಗೆಯೇ ಅನುಭವಿ ಮತ್ತು ತರಬೇತಿ ಪಡೆದಿರುವ ಸ್ಟಂಟ್ ಮಾಸ್ಟರ್‌ಗಳಿಂದ ವಿದ್ಯಾರ್ಥಿಗಳು ಮತ್ತು ಯುವಜನರು ಇಷ್ಟ ಪಡುವ ಬೈಕ್ ಸ್ಟಂಟ್ ನ ಪ್ರದರ್ಶನ ನಡೆಯಲಿದೆ.
ಜೊತೆಗೆ ಡಾನ್ಸ್ ಕ್ಷೇತ್ರದಲ್ಲಿ ಹೆಸರು ಮಾಡಿದಂತ ಕೌಶಿಕ್ ಸುವರ್ಣ ಅವರ ಕಾರ್ಯಕ್ರಮ ಕೂಡ ನಡೆಯಲಿದ್ದು, ಈ ಒಂದು ಕಾರ್ಯಕ್ರಮದಲ್ಲಿ ಬೆಂಗಳೂರಿನ ದ್ವನಿವರ್ಧಕಗಳ ವ್ಯವಸ್ಥೆ ಪರಿಚಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಇಂತಹ ಒಂದು ಅದ್ದೂರಿ ಕಾರ್ಯಕ್ರಮಕ್ಕೆ ಎಲ್ಲಾ ಕಲಾಭಿಮಾನಿಗಳಿಗೆ ಕಾಲೇಜು ಆಡಳಿತ ಮಂಡಳಿ ಪ್ರೀತಿಯ ಆಮಂತ್ರಣ ನೀಡಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.