ಕಾರ್ಕಳ: ಆರ್ಡರ್ ಶೀಟ್ ನಲ್ಲಿ ಸಹಿ: 13 ಮಂದಿ ವಕೀಲರಿಗೆ ನೋಟಿಸ್
ಕಾರ್ಕಳ ಏ.24 : ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಆರ್ಡರ್ ಶೀಟ್ ನಲ್ಲಿ ವಿನಾಕಾರಣವಾಗಿ 13 ಮಂದಿ ವಕೀಲರು ತಮ್ಮ ಸಹಿಯನ್ನು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ವಿವರಣೆ ನೀಡುವಂತೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಆರ್ಡರ್ ಶೀಟ್ ಮೇಲೆ ಸಹಿ ಮಾಡಲು ನ್ಯಾಯಾಧೀಶರಿಗೆ ಮಾತ್ರ ಅವಕಾಶವಿರುತ್ತದೆ. ಈ ಹಿನ್ನಲೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ವಿನಾಕಾರಣ ಸಹಿ ಮಾಡಿದ 13 ಮಂದಿ ವಕೀಲರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ದಿನಾಂಕ 11-02-2016 ರಂದು ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ RA 11/2016 ಮೇಲ್ಮನವಿ ದಾರರಾದ ಚಂದ್ರಶೇಖರ್ ರಾವ್ ಮತ್ತು ಪ್ರತಿವಾದಿಗಳಾದ ಮೃತ ಗಿರಿಜಾ ಬಾಯಿ (ಮಕ್ಕಳಾದ ಶ್ರೀನಿವಾಸ, ಕೃಷ್ಣ ರಾವ್, ಪುರಷೋತ್ತಮ ಮತ್ತು ಮಗಳಾದ ಇಂದಾಣಿ) ಎರಡನೇ ಪ್ರತಿವಾದಿ ಯಶೋಧಾ ಬೆಳಿರಾಯರ ನಡುವೆ ದಾಖಲು ಆಗಿರುತ್ತದೆ. ಮೇಲ್ಮನವಿದಾರ ಚಂದ್ರಶೇಖರ್ ರಾವ್ ಅವರ ಪರವಾಗಿ ಪುತ್ರ ಜಿಪಿಎ ಹೋಲರ್ ರಾದ ರಾಘವೇಂದ್ರ ರಾವ್ ರವರು ವಾದ ಮಂಡಿಸಿದ್ದಾರೆ. ಪ್ರತಿವಾದಿಗಳಾದ ಮೃತ ಗಿರಿಜಾ ಬಾಯಿ ಪರವಾಗಿ ಎಂ ಕೆ ವಿಜಯ ಕುಮಾರ್ ಮತ್ತು ಅವರ ಮಗ ವಿಪುಲ್ ತೇಜ್ ಮತ್ತು ಎರಡನೇ ಪ್ರತಿವಾದಿ ಯಶೋಧಾ ಬೆಳಿರಾಯರ ಪರವಾಗಿ ವಕೀಲರಾದ ಜಿ.ಎಮ್ ಮುರಳೀಧರ್ ಭಟ್ ರವರು ವಾದಿಸಿದ್ದಾರೆ.
ಮೇಲ್ಮನವಿದಾರರಾದ ಚಂದ್ರಶೇಖರ್ ರಾವ್, ಅವರ ಹೆಂಡತಿ ರಾಗಿಣಿ ಸಿ. ಎಸ್ ಅಲಿಯಾಸ್ ರಕ್ಷಿತಾ ಮತ್ತು ಮಗನಾದ ರಾಘವೇಂದ್ರ ರಾವ್ ರವರು ಕಾರ್ಕಳದ ವಕೀಲರ ಸಂಘದಲ್ಲಿರುವ ಕೆಲವು ವಕೀಲರ ವಿರುದ್ಧ ವೃತ್ತಿ ಧರ್ಮಕ್ಕೆ ವಿರುದ್ಧವಾಗಿ ವ್ಯವಹಾರ/ವರ್ತಿಸುತ್ತಿರುವ ಬಗ್ಗೆ ಕಾರ್ಕಳ ವಕೀಲರ ಸಂಘದ ಅಧ್ಯಕ್ಷರು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ನ್ಯಾಯಾಧೀಶರಿಗೆ ದೂರು ನೀಡಿದ್ದರು.
ಈ ಬಗ್ಗೆ ಕಾರ್ಕಳ ವಕೀಲರ ಸಂಘದ ಅಧ್ಯಕ್ಷರು ಕಾರ್ಕಳ ಪೊಲೀಸ್ ಉಪ ಅಧೀಕ್ಷರಿಗೆ 25-07-2023 ರಂದು ದೂರು ನೀಡಿದ್ದು, ಪೊಲೀಸ್ ಉಪ ಅಧೀಕ್ಷರು ಅವರ ದೂರನ್ನು ತಿರಸ್ಕಾರ ಮಾಡಿದ್ದರು. ಈ ವಿಚಾರವಾಗಿ ಕಾರ್ಕಳದ ಕೆಲವು ವಕೀಲರು ಸೆ.11, 2023 ರಂದು ನ್ಯಾಯಾಲಯದಲ್ಲಿ ಜಿಪಿಎ ದಾರರಾದ ರಾಘವೇಂದ್ರ ರಾವ್ ರವರ ಮೇಲೆ ಹಲ್ಲೆ ನಡೆಸಿ ಆರ್ಡರ್ ಶೀಟ್ ಮೇಲೆ ಅನಾವಶ್ಯಕವಾಗಿ 13 ವಕೀಲರು ಸಹಿ ಮಾಡಿದ್ದಾರೆ ಎಂದು ದೂರಲಾಗಿದೆ. ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಚಂದ್ರಶೇಖರ್ ರಾವ್ ಅವರ ಪರವಾಗಿ ಖ್ಯಾತ ನ್ಯಾಯವಾದಿಗಳಾದ ವಿ. ಕೆ ಶ್ರೀಕಾಂತರವರು ವಾದವನ್ನು ಮಂಡಿಸಿದ್ದಾರೆ.