ಎಕ್ಸ್ ಪ್ರೆಸ್ ಚಾಲಕನಿಗೆ ಕಾರು ಚಾಲಕನಿಂದ ಚೂರಿ ಇರಿತ: ದೂರು- ಪ್ರತಿದೂರು ದಾಖಲು
ಉಡುಪಿ ಏ.29 : ಎಕ್ಸ್ ಪ್ರೆಸ್ ಬಸ್ ಚಾಲಕ ಹಾರ್ನ್ ಹಾಕಿದ ಕಾರಣಕ್ಕೆ ಕಾರು ಚಾಲಕ ಬಸ್ಸನ್ನು ತಡೆದು ಚಾಲಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಇಂದು ಬೆಳಗ್ಗೆ ಪಡುಬಿದ್ರಿ ಜಂಕ್ಷನ್ ಬಳಿ ನಡೆದಿದೆ.
ಪಡುಬಿದ್ರಿ ನಿವಾಸಿ ಶೈಲು ಯಾನೆ ಶೈಲೇಶ್ ಗಾಯಗೊಂಡವರು. ಆರೋಪಿ ಮುಲ್ಕಿಯ ಇಸ್ಮಾಯಿಲ್ ಆತೀಶ್ ಬಸ್ ಚಾಲಕನಿಗೆ ಕಾಲಿನಿಂದ ತುಳಿದು, ಕೈಯಿಂದ ಹೊಡೆದು, ನಂತರ ಬಸ್‌ನಿಂದ ಇಳಿದು ಹೋಗಿ ಆತನ ಕಾರ್‌ನ ಒಳಗಡೆ ಇದ್ದ ಸಣ್ಣ ಚೂರಿಯನ್ನು ತಂದು ಪುನ: ಬಸ್‌ನ ಒಳಗಡೆ ಬಂದು ಕೊಲ್ಲುವ ಬೆದರಿಕೆ ಹಾಕಿ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿ ಜನರು ಸೇರುತ್ತಿದ್ದಂತೆ ಆರೋಪಿ ತನ್ನ KA-04-MS-6089 ನೇ ಕಾರಿನಲ್ಲಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಬಸ್ ಚಾಲಕನ ಮುಖಕ್ಕೆ ಗಾಯವಾಗಿದ್ದು, ಈ ಬಗ್ಗೆ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಮತ್ತೊಂದೆಡೆ ಇದೇ ಘಟನೆಗೆ ಸಂಬಂಧಿಸಿ ಪ್ರತಿ ದೂರು ದಾಖಲಿಸಿದ್ದು, ಕಾರು ಚಾಲಕ ಕಾರ್ನಾಡು ಇಸ್ಮಾಯಿಲ್ ಆತೀಶ್ ಕಟಪಾಡಿಯಿಂದ ತನ್ನ ನಾದಿನಿಯ ಕ್ರೆಟ್ಟಾ ಕಾರಿನಲ್ಲಿ ನನ್ನ ಮಾವ, ಅತ್ತೆ, ಪತ್ನಿ ಮತ್ತು ಮಕ್ಕಳೊಂದಿಗೆ ಹೊರಟು ಕಾಪು ಮಾರ್ಗವಾಗಿ ಎರ್ಮಾಳಿನಲ್ಲಿ NH-66 ರಲ್ಲಿ ಹೋಗುತ್ತಿದ್ದಾಗ ನನ್ನ ಹಿಂದುಗಡೆಯಿಂದ ಒಂದು ಎಕ್ಸ್‌ಪ್ರೆಸ್ ಬಸ್ಸನ್ನು ಅದರ ಚಾಲಕನು ಅತೀವೇಗದಿಂದ ಚಲಾಯಿಸಿ ಆತೀಶ್ ಚಲಾಯಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿ ಕಾರಿಗೆ ಢಿಕ್ಕಿ ಹೊಡೆಯಲು ಪ್ರಯತ್ನಿಸಿ ಕಾರಿನ ಮುಂದುಗಡೆಯಿಂದ ಒಮ್ಮೆಲೇ ರಸ್ತೆಯ ಎಡಬದಿಗೆ ಚಲಾಯಿಸಿರುತ್ತಾನೆ. ಇದರಿಂದ ಕೋಪಗೊಂಡ ಆತೀಶ್ ಹಿಂಬಾಲಿಸಿಕೊಂಡು ಹೋಗಿ ಪಡುಬಿದ್ರಿಯಲ್ಲಿ ಬಸ್ ನಿಲ್ಲಿಸಿದಾಗ ಬಸ್‌ನ ಒಳಗಡೆ ಹೋಗಿ ಬಸ್ ಚಾಲಕನ ಬಳಿ ನೀನು ಯಾಕೆ ಆ ರೀತಿ ಚಲಾಯಿಸುತ್ತೀಯ ಎಂದು ಕೇಳಿದ್ದಕ್ಕೆ ಬಸ್ ಚಾಲಕನು ಆತೀಶ್‌ರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಮಾತನಾಡಲು ನನಗೆ ಟೈಂ ಇಲ್ಲ ಎಂದು ಹೇಳಿ, ಹೊಡೆದು, ಅವನ ಬಳಿ ಇದ್ದ ಸ್ಕ್ರೂ ಡ್ರೈವರನ್ನು ತೆಗೆದು ತೋರಿಸಿರುತ್ತಾನೆ. ಆಗ ಬಸ್‌ನ ನಿರ್ವಾಹಕನು ಬಂದು ಆತೀಶ್‌ರಿಗೆ ಕೈಗಳಿಂದ ಹೊಡೆದು, ಅವರಿಬ್ಬರು ಆತೀಶ್‌ರನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ದೂರು ದಾಖಲಾಗಿದೆ.
ಈ ಎರಡೂ ವಿಚಾರಕ್ಕೆ ಸಂಬಂಧಿಸಿದಂತೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.