ಹಾವಂಜೆ: ಏ.20-ಮೇ.2 -ಶ್ರೀನಾಗ ದೇವರ-ಬ್ರಹ್ಮ ಕಲಾಷಾಭಿಷೇಕ ಮತ್ತು ಶ್ರೀವಿರಭದ್ರ ಸ್ವಾಮಿ ಬ್ರಹ್ಮಕುಂಭಾಭಿಷೇಕ
ಉಡುಪಿ ಏ.27(ಉಡುಪಿ ಟೈಮ್ಸ್ ವರದಿ) ಇರ್ಮಾಡಿ ಬೀಡು ಹಾವಂಜೆ ಇಲ್ಲಿನ ಅಬ್ಬಗ ದಾರಗ ಶ್ರೀ ವೀರ ಭದ್ರ ಸಪರಿವಾರ ದೇವಸ್ಥಾನದ ಶ್ರೀ ನಾಗ ದೇವರ ಪುನಃ ಪ್ರತಿಷ್ಟಾಪನೆ, ಬ್ರಹ್ಮ ಕಲಾಷಾಭಿಷೇಕ, ಶ್ರೀ ವೀರ ಭದ್ರ ಸ್ವಾಮಿಗೆ ಬ್ರಹ್ಮ ಕುಂಬಾಭಿಷೇಕ ,ಮಹಾ ಅನ್ನಸಂತರ್ಪಣೆ, ಹಾಗೂ ಕಾಲಾವಧಿ ಕಲ್ಕುಡ ಕೋಲ ಏ.29 ರಿಂದ ಮೇ.2 ರ ವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯ ನಾಗರಾಜ ಹೆಗ್ಡೆ ಅವರು ತಿಳಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಏ.29 ರಿಂದ ಮೇ.2 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಆ ಪ್ರಯುಕ್ತ ನಡೆಯುವ ಸಭಾ ಕಾರ್ಯಕ್ರಮವನ್ನು ಇರ್ಮಾಡಿ ಬೀಡು ಫ್ಯಾಮಿಲಿ ಟ್ರಸ್ಟ್‌ನ ಹಿರಿಯರಾದ ಪ್ರಸನ್ನ ಹೆಗ್ಡೆ, ನಿಟ್ಟೆ ವಿದ್ಯಾ ಸಮೂಹ ಸಂಸ್ಥೆಗಳ ಕುಲಪತಿ ಎನ್. ವಿನಯ್ ಹೆಗ್ಡೆ, ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತರಾದ ಎನ್ ಸಂತೋಷ್ ಹೆಗ್ಡೆ ಅವರು ಉದ್ಘಾಟಿಸಲಿದ್ದಾರೆ.
ಇರ್ಮಾಡಿಯ ಫ್ಯಾಮಿಲಿ ಟೆಂಪಲ್ ಮ್ಯಾನೆಜ್‌ಮೆಂಟ್ ಆಂಡ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಐ. ಜಯಪ್ರಸಾದ್ ಶೆಟ್ಟಿ ಇರ್ಮಾಡಿ ಬೀಡು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಶಿವರಾಮ್ ಬಿ.ಶೆಟ್ಟಿ, ಭಾರತದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತರಾದ ವಿಶ್ವನಾಥ ಶೆಟ್ಟಿ, ಇರ್ಮಾಡಿ ಬೀಡು ಲೀಲಾ ಎಸ್. ಶೆಟ್ಟಿ, ವಿಜಯಲಕ್ಷ್ಮೀ ಯು. ಹೆಗ್ಡೆ, ಕೊಡವೂರಿನ ರಾಧ ಎಸ್ ಹೆಗ್ಡೆ ಮತ್ತು ಕುಟುಂಬಸ್ಥರು, ತೋನ್ಸೆಯ ನಾರಾಯಣ ಶೆಟ್ಟಿ, ಆದಿ ಉಡುಪಿಯ ಕೃಷ್ಣ ಶೆಟ್ಟಿ, ಅರುಣ್ ಶೆಟ್ಟಿ, ಅಮೃತ ರಾಜೀವ ಆಳ್ವ ಅವರು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಸುರೇಶ್ ಬಿ. ಶೆಟ್ಟಿ, ಕೋಶಾಧಿಕಾರಿ ರಕ್ಷಿತ್ ಶೆಟ್ಟಿ, ವೇದ ಮೂರ್ತಿ ಗುರುರಾಜ್ ಭಟ್ ಕೊಳಲಗಿರಿ ಮೊದಲಾದವರು ಉಪಸ್ಥಿತರಿದ್ದರು.
ನಾಲ್ಕು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಗಳು ಹೀಗಿವೆ
ಏ.29 ರಂದು ಸಂಜೆ 5 ಗಂಟೆಯಿಂದ ಹೊರೆ ಕಾಣಿಕೆ ಸಮರ್ಪಣೆ ಮತ್ತು ದೇವತಾ ಪ್ರಾರ್ಥನೆ ನಡೆಯಲಿದೆ.
ಏ.30 ರಂದು ಬೆಳಿಗ್ಗೆ 8 ಗಂಟೆಯಿಂದ ತೋರಣ ಮುಹೂರ್ತ, ಪುಣ್ಯಾಹ ನಾಂದಿ, ಅರಣಿ ಮಥನ, ಮಹಾ ಗಣಪತಿ ಹೋಮ, ಮೃತ್ಯುಂಜಯ ಹೋಮ, ಹಾವಂಜೆ ಗ್ರಾಮದ ದಾಸರ ಬೆಟ್ಟುವಿನಲ್ಲಿ ಇರುವ ನೀಚ ನಾಗ ಪುನಃ ಪ್ರತಿಷ್ಠೆ ನಡೆಯಲಿದೆ.
ಅದೇ ದಿನ ಸಂಜೆ 5 ಗಂಟೆಯಿಂದ ವೀರಭದ್ರ ಸ್ವಾಮಿಯ ಸನ್ನಿಧಿಯಲ್ಲಿ ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ , ವಾಸ್ತು ಹೋಮ , ಇಂದ್ರಾದಿ ಬಲಿ, ಕಲ್ಕುಡ ಸನ್ನಿಧಿಯಲ್ಲಿ ಭೂ ಶುದ್ಧಿ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಇಂದ್ರಾದಿ ಬಲಿ ನಡೆಯಲಿದೆ.
ಮೇ.1 ರಂದು ಬೆಳಿಗ್ಗೆ 8 ಗಂಟೆಯಿಂದ ವೀರಭದ್ರ ಸ್ವಾಮಿಯ ಸನ್ನಿಧಿಯಲ್ಲಿ ನವಗ್ರಹ ಹೋಮ, ಚಂಡಿಕಾ ಹೋಮ, ಬಿಂಬ ಶುದ್ಧಿ ಪ್ರಕ್ರಿಯೆ, ಶಾಂತಿ – ಪ್ರಾಯಶ್ಚಿತ್ತ ಹೋಮಗಳು, ಕಲ್ಕುಡ ಸನ್ನಿಧಿಯಲ್ಲಿ ಕಲಶ ಪ್ರತಿಷ್ಠಾ ಪ್ರಧಾನ ಹೋಮ, ಕಲಶಾಭಿಷೇಕ , ಪ್ರಸನ್ನ ಪೂಜೆ ನಡೆಯಲಿದೆ.
ಸಂಜೆ ವೀರಭದ್ರ ಸ್ವಾಮಿಯ ಸನ್ನಿಧಿಯಲ್ಲಿ ಅಘೋರ ಹೋಮ, 109 ಕಲಶಾಧಿವಾಸ, ಪ್ರಧಾನ ಹೋಮ, ನಾಗಬ್ರಹ್ಮ ಸನ್ನಿಧಿಯಲ್ಲಿ ಸಪ್ತ ಶುದ್ಧಿ, ವಾಸ್ತು ರಾಕ್ಷೋಘ್ನ, ಇಂದ್ರಾದಿ ಬಲಿ, ಬಿಂಬಾಧಿ ವಾಸ ನಡೆಯಲಿದೆ
ಮೇ 2 ರಂದು ಬೆಳಗ್ಗೆ ಏಳು ಗಂಟೆಯಿಂದ ಪ್ರತಿಷ್ಠಾ ಹೋಮ, ಬೆಳಗ್ಗೆ 10.14 ರಿಂದ ಒದಗುವ ಮಿಥುನ ಲಗ್ನ ಸುಮಹೂರ್ತದಲ್ಲಿ ನಾಗ-ಬ್ರಹ್ಮದೇವರ ಪುನಃ ಪ್ರತಿಷ್ಠಾಪನೆ, ತಿಲ ಹೋಮ, ಕುಷ್ಮಾಂಡ ಹೋಮ, ಪವಮಾನ ಸೂಕ್ತ ಹೋಮ, ನಾಗಬ್ರಹ್ಮ ದೇವರಿಗೆ ಸ್ನಪನ ಕಲಶ ಪ್ರತಿಷ್ಠೆ , ಪ್ರಧಾನ ಹೋಮಗಳು, ಸರ್ಪ ಪ್ರಾಯಶ್ಚಿತ ರೂಪ ಆಶ್ಲೇಷ ಬಲಿ, ಕಲಶಾಭಿಷೇಕ , ಪ್ರಸನ್ನ ಪೂಜೆ ವಟು ಆರಾಧನೆ, ಪ್ರಸಾದ ವಿತರಣೆ ನಡೆಯಲಿದೆ ಹಾಗೂ 12 ಗಂಟೆಗೆ ಅಭಿಜಿತ್ ಲಗ್ನ ಸುಮಹೂರ್ತದಲ್ಲಿ ವೀರಭದ್ರ ದೇವರಿಗೆ ಬ್ರಹ್ಮಕುಂಭಾಭಿಷೇಕ , ಪ್ರಸನ್ನ ಪೂಜೆ ಹಾಗೂ ಮಧ್ಯಾಹ್ನ ಒಂದರಿಂದ ಮಹಾ ಅನ್ನ ಸಂರ್ಪಣೆ , ಸಂಜೆ 4.30ಕ್ಕೆ, ಶ್ರೀ ನಾಗದೇವರ ಸನ್ನಿಧಿಯಲ್ಲಿ ಭೋಗ ದೀಪಾರಾಧನೆ, ನಾಗದರ್ಶನ ಸೇವೆ ಮತ್ತು ರಾತ್ರಿ 9:00ಯಿಂದ ಕಲ್ಕುಡ ಕೋಲ ನಡೆಯಲಿದೆ