ಉಡುಪಿ: ನೇಹಾ ಹತ್ಯೆ ಪ್ರಕರಣ- ಎಬಿವಿಪಿಯಿಂದ ಬೃಹತ್ ಜಾಥಾ
ಉಡುಪಿ ಏ.23: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹೀರೆಮಠ ಎನ್ನುವ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಮತ್ತು ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಮಾಡಿದ ಎಫ್ಐಆರ್ ಖಂಡಿಸಿ ಎಬಿವಿಪಿ ಉಡುಪಿ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾವನ್ನು ಹಮ್ಮಿಕೊಳ್ಳಲಾಯಿತು.
ನಗರದ ಜೋಡುಕಟ್ಟೆಯಿಂದ ಪ್ರಾರಂಭಗೊಂಡ ಜಾಥ ಕವಿ ಮುದ್ದಣ್ಣ ಮಾರ್ಗವಾಗಿ ಸಾಗಿ ಕ್ಲಾಕ್ ಟವರ್ ನಲ್ಲಿ ಸಂಪನ್ನಗೊಂಡಿತು.
ಈ ವೇಳೆ ರಾಜ್ಯ ಸಹ-ಕಾರ್ಯದರ್ಶಿ ಹರ್ಶಿತ್ ಕೊಯ್ಲ ಅವರು ಮಾತನಾಡಿ ಪ್ರತಿಭಟಿಸಿದಕ್ಕೆ ಹಾಕಿದ ಎಫ್ಐಆರ್ ನ ಬೊಡ್ಡು ಬೆದರಿಕೆಗೆ ಹೆದರುವ ಸಂಘಟನೆ ಎಬಿವಿಪಿಯಲ್ಲ. ಇಲ್ಲಿ ಹೋರಾಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಬಿರಿಯಾನಿ ಆಸೆಗೊ ಅಥವಾ ಯಾವುದೇ ಆಮಿಷಕ್ಕೊ ಒಳಗಾಗಿ ಸೇರಿದವರಲ್ಲ, ಒಂದು ಹೆಣ್ಣು ಮಗಳಿಗಾದ ಅನ್ಯಾಯವನ್ನು ಖಂಡಿಸಿ ನ್ಯಾಯಗೋಸ್ಕರ ಬೀದಿಗಿಳಿದವರು. ಸರ್ಕಾರ ಈ ಕೂಡಲೇ ಎಚ್ಚೆತ್ತು ವಿದ್ಯಾರ್ಥಿಗಳ ಮೇಲೆ ಹೂಡಿದ ಎಫ್ಐಆರ್ ಅನ್ನು ವಜಾಗೊಳಿಸಬೇಕು ಇಲ್ಲದೆ ಹೋದಲ್ಲಿ ರಾಜ್ಯಾದ್ಯಂತ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ವಿದ್ಯಾರ್ಥಿನಿ ಮಾಣಿಕ್ಯ ಭಟ್ ಮಾತನಾಡಿ ಇತ್ತಿಚಿನ ದಿನದಲ್ಲಿ ಕಾಲೇಜು ಕ್ಯಾಂಪಸ್ ಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಅದು ನೇಹಾ ಹೀರೆಮಠ ಅವರ ಕೊಲೆ ಪ್ರಕರಣ ಆಗಿರಬಹುದು ಅಥವಾ ಕಡಬದಲ್ಲಿ ನಡೆದ ಆಸಿಡ್ ದಾಳಿಯಾಗಿರಬಹುದು ಅಥವಾ ಉಡುಪಿಯಲ್ಲಿ ಈ ಹಿಂದೆ ನಡೆದ ವಿಡಿಯೋ ಪ್ರಖರಣವಾಗಿರಬಹುದು ಇದರಿಂದಾಗಿ ನಮಗೆ ಭದ್ರತೆಯ ಕೊರತೆ ಎದ್ದು ಕಾಣಿಸುತ್ತಾ ಇದೆ. ರಾಜ್ಯ ಸರ್ಕಾರ ಈ ಕೂಡಲೇ ಈ ವಿಷಯವಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀರಾಮ್ ಅಂಗೀರಸ, ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ತಾಲೂಕು ಸಂಚಾಲಕರುಗಳಾದ ಅಜಿತ್ ಜೋಗಿ ಮತ್ತು ಶ್ರೇಯಸ್ ಅಂಚನ್, ನಗರ ಕಾರ್ಯದರ್ಶಿ ಶ್ರೀವತ್ಸ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ ಮತ್ತು ಪ್ರಮುಖರಾದ ಕಾರ್ತಿಕ್, ನವೀನ್, ಸ್ವಸ್ತಿಕ್, ವರುಣ್, ಮನು, ಮಂಗಳಗೌರಿ, ಸುಚಿತ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.