ಮಣಿಪಾಲ: ಕೆಎಂಸಿಯಲ್ಲಿ ವೈದ್ಯಕೀಯ ಪ್ರಯೋಗಾಲಯ ವೃತ್ತಿಪರರ ಸಪ್ತಾಹ
ಮಣಿಪಾಲ ಏ. 22(ಉಡುಪಿ ಟೈಮ್ಸ್ ವರದಿ): ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಯ ವತಿಯಿಂದ ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ವೈದ್ಯಕೀಯ ಪ್ರಯೋಗಾಲಯದ ವೃತ್ತಿಪರ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಯಿತು.
ಭವಿಷ್ಯವೇ ಪ್ರಯೋಗಾಲಯ (ದಿ ಫ್ಯೂಚರ್ ಈಸ್ ಲ್ಯಾಬ್)’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು, ಈ ಆಚರಣೆಯ ಮೂಲದ ಬಗ್ಗೆ ಬೆಳಕು ಚೆಲ್ಲಿದರು, “1975 ರಲ್ಲಿ ಅಮೇರಿಕನ್ ಸೊಸೈಟಿ ಫಾರ್ ಮೆಡಿಕಲ್ ಟೆಕ್ನಾಲಾಜಿ, ಆರೋಗ್ಯ ರಕ್ಷಣೆಯಲ್ಲಿ ಪ್ರಯೋಗಾಲಯ ವೃತ್ತಿಪರರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಿತ . ಪ್ರಯೋಗಾಲಯದ ವೃತ್ತಿಪರರ ದಣಿವರಿಯದ ಪ್ರಯತ್ನಗಳನ್ನು ನಾವು ಶ್ಲಾಘಿಸಬೇಕು, ಅವರ ನಿಖರವಾದ ಮತ್ತು ಸಮಯೋಚಿತ ಪರೀಕ್ಷಾ ಫಲಿತಾಂಶಗಳು ರೋಗಿಗಳ ರೋಗನಿರ್ಣಯ, ಚಿಕಿತ್ಸೆ ಮತ್ತು ಒಟ್ಟಾರೆ ಆರೋಗ್ಯದ ಫಲಿತಾಂಶಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ” ಎಂದು ಹೇಳಿದರು.
ಈ ವೇಳೆ ಗೌರವ ಅತಿಥಿಗಳಾಗಿದ್ದ ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ.ಕೃಷ್ಣಾನಂದ ಪ್ರಭು ಅವರು ‘ಭವಿಷ್ಯವೇ ಪ್ರಯೋಗಾಲಯ’ ಎಂಬ ವಿಷಯದ ಕುರಿತು ವಿವರಿಸಿದರು. ಹಾಗೂ ಅವರು ಪ್ರಯೋಗಾಲಯಗಳ ವಿಕಸನ ಪಾತ್ರವನ್ನು ವೈಜ್ಞಾನಿಕ ಪರಿಶೋಧನೆಯ ತಾಣಗಳಾಗಿ ಮಾತ್ರವಲ್ಲದೆ ಆವಿಷ್ಕಾರ, ನಾವೀನ್ಯತೆ ಮತ್ತು ಪ್ರಗತಿಯ ಕುರಿತು ಒತ್ತಿ ಹೇಳಿದರು.
ಪ್ಯಾಥೋಲಾಜಿ ಮುಖ್ಯಸ್ಥರಾದ ಡಾ. ಮೇರಿ ಮ್ಯಾಥ್ಯೂ , ರಕ್ತಶಾಸ್ತ್ರ ವಿಭಾಗದ ಡಾ.ಸುಷ್ಮಾ ಬೇಲೂರಕರ್, ಬಯೋಕೆಮಿಸ್ಟ್ರಿ ಪ್ರಭಾರಿ ಡಾ ವಿಜೇತಾ ಶೆಣೈ, ಮೈಕ್ರೋಬಯಾಲಜಿ ಲ್ಯಾಬ್ನ ಉಸ್ತುವಾರಿ ಡಾ. ಬರ್ನಿನಿ ಮತ್ತು ಡಾ. ಪದ್ಮಜಾ, ನರ್ಸಿಂಗ್ ಸೇವೆಗಳ ಮುಖ್ಯಸ್ಥರಾದ ಡಾ. ಸುಬಾ ಸೂರಿಯಾ, ಎಲ್ಲಾ ಸಹಾಯಕ ಸೇವೆ ಮತ್ತು ಆಡಳಿತ ಸೇವೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಗಳ ನಿರ್ದೇಶಕ ಡಾ.ರವೀಂದ್ರ ಮರಡಿ ಅವರು ಸ್ವಾಗತಿಸಿ ಕಾರ್ಯಕ್ರಮದ ಪ್ರಸ್ತಾವನೆಗೈದರು. ಡಾ. ಸಿಂಧೂರ ಲಕ್ಷ್ಮಿ ಅವರು ವಂದಿಸಿದರು.