ಪಂಪ್ವೆಲ್ ಮೇಲ್ಸೇತುವೆ ಮೇಲೆ ಆಕ್ಷೇಪಾರ್ಹ ಬರಹ : ಇಬ್ಬರು ವಿದ್ಯಾರ್ಥಿಗಳು ವಶಕ್ಕೆ
ದಕ್ಷಿಣ ಕನ್ನಡ: ಮಂಗಳೂರಿನ ಪಂಪ್ವೆಲ್ ಮೇಲ್ಸೇತುವೆ ಗೋಡೆ ಮೇಲೆ ಲಾಕ್ಡೌನ್ ಬೇಕು ಎಂದು ಬರೆದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಸ್ಥಳೀಯ ಖಾಸಗಿ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಲಾಕ್ಡೌನ್ ಆದರೆ ಪರೀಕ್ಷೆ ಮುಂದೂಡುತ್ತದೆ ಎಂಬ ಕಾರಣಕ್ಕಾಗಿ ಗೋಡೆ ಮೇಲೆ ಬರೆದಿರುವುದಾಗಿ ಹೇಳಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಆರೋಪಿ ಕಾಲೇಜು ವಿದ್ಯಾರ್ಥಿಗಳು ತಾವು ಎಸಗಿರುವ ತಪ್ಪನ್ನು ಒಪ್ಪಿಕೊಂಡಿದ್ದು, ಲಾಕ್ಡೌನ್ ಆದರೆ ಕಾಲೇಜು ಪರೀಕ್ಷೆಗಳು ಮುಂದೂಡಲ್ಪಡುತ್ತದೆ. ನಮಗೆ ಕಾಲೇಜಿಗೆ ಹೋಗೋಕೆ ಇಷ್ಟ ಇಲ್ಲ ಹಾಗಾಗಿ ಲಾಕ್ಡೌನ್ ಬೇಕು ಎಂಬುದಾಗಿ ಬರೆದಿದ್ದೇವೆ ಎಂದು ವಿಚಾರಣೆ ವೇಳೆ ವಿದ್ಯಾರ್ಥಿಗಳು ಹೇಳಿದ್ದಾರೆ.
ಏ.20 ರಂದು ಪಂಪ್ವೆಲ್ ಮೇಲ್ಸೇತುವೆ ಗೋಡೆಯ ಮೇಲೆ ಲಾಕ್ಡೌನ್ ಬೇಕು ಸೇರಿದಂತೆ ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿತ್ತು ಈ ಕುರಿತು ಇಬ್ಬರು ಮಂಗಳೂರು ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಕಾಲೇಜು ಕಾರ್ಯಾರಂಭ ಮಾಡಿದ ಬಳಿಕವೂ ಕಾಲೇಜಿಗೆ ಹೋಗುವುದೆಂದರೆ ಆಲಸ್ಯ ಮಾಡುತ್ತಿದ್ದರು. ಅಲ್ಲದೆ ಆನ್ ಲೈನ್ ತರಗತಿಗೆ ಹಾಜರಾಗಿ ಪಾಠ ಕೇಳೋದನ್ನು ಯಾವಾಗಲೂ ತಪ್ಪಿಸುತ್ತಿದ್ದರು.
ಮನೆಯವರ ಒತ್ತಾಯಕ್ಕೆ ಮಣಿದು ಕಾಲೇಜಿಗೆ ಹೋಗುತ್ತಿದ್ದ ಇವರು ಪರೀಕ್ಷೆಗಳು ಮುಂದೂಡಿದರೆ ಮತ್ತಷ್ಟು ದಿನ ಆರಾಮವಾಗಿ ಇರಬಹುದು ಎಂಬ ಉದ್ದೇಶದಿಂದ ಬರೆದಿರೋದಾಗಿ ವಿಚಾರಣೆ ವೇಳೆ ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ.