ಸಮವಸ್ತ್ರಕ್ಕೆ ಗೌರವ ತರುವ ಕೆಲಸ ಆಗಬೇಕು : ಎಸ್.ಪಿ ಡಾ.ಅರುಣ ಕೆ.
ಉಡುಪಿ ಏ.19: ದೇಶದ ಕಾನೂನು ಹಾಗೂ ಸಾಮಾಜಿಕ ಭದ್ರತೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್, ಗ್ರಹ ರಕ್ಷಕ ಸೇರಿದಂತೆ ವಿವಿಧ ರಕ್ಷಣಾ ಇಲಾಖೆಯಲ್ಲಿನ ಸಿಬ್ಬಂದಿಗಳು ತಾವು ಧರಿಸುವ ಸಮವಸ್ತ್ರಗಳಿಗೆ ಸಮಾಜದಲ್ಲಿ ಗೌರವ ತರುವ ಬದ್ಧತೆಯನ್ನು ಇರಿಸಿಕೊಳ್ಳಬೇಕು ಎಂದು ಜಿಲ್ಲಾ ಎಸ್.ಪಿ ಡಾ.ಅರುಣ.ಕೆ ಅವರು ಹೇಳಿದರು.
ಜಿಲ್ಲಾ ಗ್ರಹ ರಕ್ಷಕ ದಳ ಕಚೇರಿಯಲ್ಲಿ ನಡೆದ ವಾರ್ಷಿಕ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ತರಬೇತಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಹೆಚ್ಚುವರಿ ಎಸ್.ಪಿ ಹಾಗೂ ಗ್ರಹ ರಕ್ಷಕ ದಳ ಸಮಾದೇಷ್ಟರಾದ ಎಸ್.ಟಿ.ಸಿದ್ದಲಿಂಗಪ್ಪ ಅವರು, ಇಲಾಖೆಯಲ್ಲಿ ನೀಡುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಗತ್ಯ ತರಬೇತಿ ಪಡೆದುಕೊಳ್ಳಲು ಗ್ರಹ ರಕ್ಷಕರು ಹಾಗೂ ಗ್ರಹ ರಕ್ಷಕಿಯರು ಉತ್ಸುಕರಾಗಬೇಕು. ಜಿಲ್ಲಾ ಕಚೇರಿ ಹಾಗೂ ಜಿಲ್ಲೆಯಲ್ಲಿ ಗ್ರಹ ರಕ್ಷಕ ಇಲಾಖೆಗೆ ಕಾಯಕಲ್ಪ ನೀಡುವ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು. ಹಾಗೂ ರಾಜ್ಯದ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಲ್ಲಿ ಓರ್ವರಾಗಿರುವ ಎಸ್.ಪಿ ಡಾ.ಅರುಣ ಕೆ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿರುವುದು ಶಾಶ್ವತವಾಗಿ ತರಬೇತಿಗಳ ನೆನಪಿನಲ್ಲಿ ಉಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಹಾಗೂ ಜಿಲ್ಲಾ ಸಿವಿಲ್ ಡಿಫೆನ್ಸ್ ಇಲಾಖೆಯ ಕಮಾಂಡಿಂಗ್ ಅಧಿಕಾರಿ ಡಾ.ವಿಜೇಂದ್ರ ರಾವ್, ಜಿಲ್ಲಾ ತರಬೇತು ಅಧಿಕಾರಿ ಚಂದ್ರಕಾಂತ್, ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ , ಬೈಂದೂರು ಘಟಕಾಧಿಕಾರಿ ರಾಘವೇಂದ್ರ ಎನ್ ಉಪಸ್ಥಿತರಿದ್ದರು.