ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಶೇ. 43ರಷ್ಟು ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳ: ಬಸವರಾಜ ಬೊಮ್ಮಾಯಿ
ಹಾವೇರಿ ಏ.19 : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ 43ರಷ್ಟು ಹೆಚ್ಚಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಈ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ ಅವರು, ಈ ರಾಜ್ಯ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಗೂಂಡಾ ರಾಜ್ಯವಾಗಿದೆ. ಪೊಲೀಸರು ಆರೋಪಿಗಳನ್ನು ಹಿಡಿದರೂ ಅವರನ್ನು ರಾಜಕೀಯ ಪ್ರಭಾವ ಬಳಸಿ ಬಿಡುಗಡೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಪ್ತಾ ವಸೂಲಿ ಹೆಚ್ಚಾಗಿದ್ದು, ಪೊಲಿಸ್ ಸ್ಟೇಷನ್ ಗಳು ಸೆಟ್ಲಮೆಂಟ್ ಕೇಂದ್ರಗಳಾಗಿವೆ ಎಂದು ಆರೋಪ ಮಾಡಿರುವ ಅವರು, ಹುಬ್ಬಳ್ಳಿಯಲ್ಲಿ ಕಾಲೇಜು ಆವರಣದಲ್ಲಿಯೇ ಒಬ್ಬ ಯುವಕ ಯುವತಿಗೆ 9 ಬಾರಿ ಇರಿದು ಓಡಿ ಹೋಗುತ್ತಾನೆ ಎಂದರೆ ಅವನ ಹಿಂದೆ ಯಾವ ಶಕ್ತಿ ಇದೆ. ಗೃಹ ಸಚಿವರು ಅದೊಂದು ಪ್ರೇಮ ಪ್ರಕರಣ ಇಷ್ಟು ಹಗುರ ಹೇಳಿಕೆ ಕೊಟ್ಟರೆ ಅಪರಾಧಿಗಳಿಗೆ ಪುಷ್ಟಿ ಬರದೇ ಇನ್ನೇನಾಗುತ್ತದೆ ಎಂದು ಪ್ರಶ್ನಿಸಿದರು.
ಹಾವೇರಿಯಲ್ಲಿ ಅತ್ಯಾಚಾರ ಪ್ರಕರಣ ನಡೆದರೆ ಅದನ್ನು ಮುಚ್ಚಿಹಾಕುವ ಯತ್ನ ಮಾಡಿದರು. ನಂತರ ಆ ಮಹಿಳೆ ಬಹಿರಂಗವಾಗಿ ಹೇಳಿಕೆ ಕೊಟ್ಟ ಮೇಲೆ ಕೇಸ್ ದಾಖಲಿಸಿಕೊಂಡರು. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದರು. ಸಿಎಂ, ಡಿಜಿಪಿ ಇದ್ದಾಗಲೇ ಈ ರೀತಿ ನಡೆಯುತ್ತಿದೆ ಎಂದರೆ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಹಾಗೂ ಹಾವೇರಿ ಪ್ರಕರಣದಲ್ಲಿ ಸಿಎಂ ಸ್ಥಳೀಯ ಶಾಸಕರಿಗೆ ನೋಡಿಕೊಳ್ಳುವಂತೆ ಸೂಚಿಸುತ್ತಾರೆ. ಅಂದರೆ ಅವರು ಏನೂ ಮಾತನಾಡದಂತೆ ನೋಡಿಕೊಳ್ಳಲು ಹೇಳುತ್ತಾರೆ ಎಂದು ಟೀಕಿಸಿದರು.