ಮಂಗಳೂರು: ಕಾರು-ಬೈಕ್ ಡಿಕ್ಕಿ-ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು
ಮಂಗಳೂರು, ಎ.17: ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್ ನಲ್ಲಿ ನಡೆದಿದೆ.
ಬೆಳ್ತಂಗಡಿ ಮೂಲದ, ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಸಾವಿಯೊ ಮಹೇಶ್ (21) ಮೃತಪಟ್ಟವರು. ಅಪಘಾತದಲ್ಲಿ ಸಹ ಸವಾರರಾಗಿದ್ದ ಬೆಳ್ತಂಗಡಿ ಲಾಯ್ಲ ನಿವಾಸಿ ಪ್ರಣಮ್ ಶೆಟ್ಟಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಿಬ್ಬರೂ ಹಾಸ್ಟೆಲ್ ನಲ್ಲಿದ್ದುಕೊಂಡು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದರು. ಸೋಮವಾರ ಸಂಜೆ ಹೊರಗಡೆ ಟ್ಯೂಶನ್ ಮುಗಿಸಿ ಬೈಕಿನಲ್ಲಿ ರಾತ್ರಿ 9 ಗಂಟೆ ವೇಳೆಗೆ ಹಿಂತಿರುಗಿ ಬರುತ್ತಿದ್ದರು. ಈ ವೇಳೆ ಕಾಲೇಜಿನ ಎದುರಿನ ರಸ್ತೆಯಿಂದ ಗೇಟಿನತ್ತ ತಿರುವು ಪಡೆಯುತ್ತಿದ್ದಾಗ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರೂ ಬೈಕ್ ಸವಾರರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮಹೇಶ್ ಅವರು ಆಸ್ಪತ್ರೆಗೆ ಹೋಗಿವಷ್ಟರಲ್ಲಿ ಕೊನೆಯುಸಿಳೆದಿದ್ದಾರೆ ಎಂಬುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ನಾಸಿರ್ ಅವರು ನೀಡಿದ ದೂರಿನನ್ವಯ ಕಾರು ಚಾಲಕ ಶ್ಯಾಮ್ ಸುಧೀರ್ ಎಂಬಾತನ ವಿರುದ್ಧ ನಗರ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.