ಅಭಿವೃದ್ಧಿಪರ ಯೋಜನೆಗಾಗಿ ಜಯಪ್ರಕಾಶ್ ಹೆಗ್ಡೆ ಗೆಲ್ಲಿಸಿ- ಐವನ್ ಡಿಸೋಜಾ
ಉಡುಪಿ ಎ.17(ಉಡುಪಿ ಟೈಮ್ಸ್ ವರದಿ): ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಯಪ್ರಕಾಶ್ ಹೆಗ್ಡೆ ಅವರು ಅಧಿಕಾರಕ್ಕೆ ಬಂದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೊಸ ಯೋಜನೆಗಳು ಜಾರಿ ಬಂದು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಅವರು ಹೇಳಿದ್ದಾರೆ.
ಈ ಬಗ್ಗೆ ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಬಿಜೆಪಿ ಒಂದೇ ಒಂದು ನೂತನ ಯೋಜನೆ ತಂದಿಲ್ಲ, ಜನರ ಪರ ಹೋರಾಡಿಲ್ಲ ಈ ಭಾರೀ ಉಡುಪಿ ಕ್ಷೇತ್ರದ ಅಭಿವೃದ್ಧಿಗೆ ಸರಿಯಾದ ಅಭ್ಯರ್ಥಿಯನ್ನು ಕಾಂಗ್ರೆಸ್ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ನೀಡಿದೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಈ ಕ್ಷೇತ್ರದ ಸಂಸದರಾಗಿ ಗೆಲ್ಲಿಸಿದರೆ ಜಿಲ್ಲೆಗೆ ಹೊಸ ಹೊಸ ಯೋಜನೆಗಳು ಜಾರಿಯಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಆದ್ದರಿಂದ ಈ ಭಾರೀ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಹಾಗೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವಂತಹ ಸಂದರ್ಭದಲ್ಲಿ ಭರವಸೆ ನೀಡಿದಂತಹ 5 ಗ್ಯಾರಂಟಿ ಯೋಜನೆಗಳ ವಾಗ್ದಾನವನ್ನು ಯಶಸ್ವಿಯಾಗಿ ನೆರವೇರಿಸಿದೆ. ರಾಜ್ಯದ ಪ್ರತಿಯೊಬ್ಬ ಮತದಾರನು ಒಂದಲ್ಲ ಒಂದು ಗ್ಯಾರಂಟಿ ಯೋಜನೆಯ ಫಲಾನುಭವಿಯಾಗಿದ್ದಾರೆ. ಇಂದು ಮತದಾರರ ಮನೆಗೆ ಹೋದಾಗ ಅವರು ಸರಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಎಂಬುದನ್ನು ಸಂತಸದಿಂದ ಹೇಳಿಕೊಳ್ಳುತ್ತಾರೆ. ಹಾಗೂ ಈ 5 ಗ್ಯಾರಂಟಿ ಯೋಜನೆಗಳು ಬಡವರ, ಮಹಿಳೆಯರ ಆರ್ಥಿಕ ಸುದಾರಣೆಗಾಗಿ ಕೈಗೊಂಡ ಕಾರ್ಯಕ್ರಮಗಳು ಎಂಬುದನ್ನು ರಾಜ್ಯದ ಆರುವರೆ ಕೋಟಿ ಜನರು ಒಪ್ಪಿಕೊಂಡಿದ್ದಾರೆ. ಅದೇ ರೀತಿ ಲೋಕ ಸಭಾ ಚುನಾವಣೆಗೂ ಕಾಂಗ್ರೆಸ್ ಸರಕಾರ ನಾರಿ ನ್ಯಾಯ್ ಗ್ಯಾರಂಟಿ ಎಂಬ ಮತ್ತೆ 5 ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ 5 ಗ್ಯಾರಂಟಿಗಳು ಜಾರಿಗೆ ಬರಲಿದೆ ಎಂದು ತಿಳಿಸಿದರು.
ಈ 5 ನಾರಿ ನ್ಯಾಯ್ ಗ್ಯಾರಂಟಿ ಯೋಜನೆಯಲ್ಲಿ “ಮಹಾಲಕ್ಷ್ಮೀ” ಯೋಜನೆ ಮೂಲಕ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವ ಭರವಸೆ, “ಆದಿ ಅಬಾದಿ ಪೂರ ಹಕ್” ಯೋಜನೆ ಮೂಲಕ ನೇಮಕಾತಿಯಲ್ಲಿ ಮಹಿಳೆಯರಿಗೆ ಅರ್ಧದಷ್ಟು ಉದ್ಯೋಗ ನೀಡುವ ಗ್ಯಾರಂಟಿ, “ಶಕ್ತಿಕಾ ಸಮ್ಮಾನ್” ಯೋಜನೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತರಿಗೆ ವೇತನ ದ್ವಿಗುಣಗೊಳಿಸುವ ಗ್ಯಾರಂಟಿ, “ಅಧಿಕಾರ್ ಮೈತ್ರಿ” ಯೋಜನೆಯಡಿಯಲ್ಲಿ ಮಹಿಳೆಯರ ಹಕ್ಕು ಜಾಗೃತಿ ಮೂಡಿಸಲು ಪ್ರತೀ ಪಂಚಾಯತ್‍ನಲ್ಲಿ ಪ್ಯಾರಾ ಲೀಗಲ್ ನೇಮಕ ಮಾಡುವ ಗ್ಯಾರಂಟಿ ಹಾಗೂ “ಸಾವಿತ್ರಿ ಬಾಯ್ ಪುಲೆ ಹಾಸ್ಟೆಲ್” ಯೋಜನೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಕನಿಷ್ಠ ಒಂದು ಹಾಸ್ಟೆಲ್ ನಿರ್ಮಾಣ ಮಾಡುವ ಗ್ಯಾರಂಟಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ನಗರ ಪ್ರಚಾರ ಸಮೀತಿ ಉಸ್ತುವಾರಿ ಕೃಷ್ಣಮೂರ್ತಿ ಆಚಾರ್ಯ, ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.