ಶಿಬರೂರು ಕೊಡಮಣಿತ್ತಾಯ ಕ್ಷೇತ್ರ : ಎ.22 ರಿಂದ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಜಾತ್ರಮಹೋತ್ಸವ
ಸುರತ್ಕಲ್ ಎ.16 : “ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಎ.22 ರಿಂದ ಬ್ರಹ್ಮಕುಂಭಾಭಿಷೇಕ ಮತ್ತು ಅಷ್ಟಪವಿತ್ರ ನಾಗಮಂಡಲ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ತಿಬಾರ್ ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಕ್ಷೇತ್ರದ ತಂತ್ರಿವರೇಣ್ಯರಾದ ವೇದವ್ಯಾಸ ತಂತ್ರಿಗಳು, “ಕ್ಷೇತ್ರದಲ್ಲಿ ಕೊಡಮಣಿತ್ತಾಯ ದೈವ ಮತ್ತು ನಾಗದೇವರ ಆರಾಧನೆ ಪ್ರಮುಖವಾಗಿ ನಡೆಯಲಿದೆ. ಈ ಬಾರಿ ದೈವಸ್ಥಾನ ಸಂಪೂರ್ಣ ಜೀರ್ಣೋದ್ದಾರಗೊಂಡಿದ್ದು ಊರ ಪರವೂರ ಭಕ್ತರನ್ನು ಕ್ಷೇತ್ರಕ್ಕೆ ಸೆಳೆಯುತ್ತಿದೆ. ಕ್ಷೇತ್ರದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡಬೇಕು” ಎಂದರು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಕೈಯ್ಯೂರಗುತ್ತು ಮಾತನಾಡಿ, “ಎ.22ರಂದು ಕ್ಷೇತ್ರದಲ್ಲಿ ಧಾರ್ಮಿಕ ಮತ್ತು ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಸ್ವಾಮೀಜಿಗಳ ಸಮಕ್ಷಮದಲ್ಲಿ ಧಾರ್ಮಿಕ ಮುಖಂಡರ ಹಾಗೂ ಅನೇಕ ಸಾಂಸ್ಕೃತಿಕ ತಂಡಗಳ ಹಾಗೂ ಭಜನಾ ಮಂಡಳಿಗಳ ಮುಖಾಂತರ ನಿರಂತರ ಭಜನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. ಹಾಗೂ ಎ.26ರಂದು ಶ್ರೀ ಉಳ್ಳಾಯ ಕೊಡಮಣಿತ್ತಾಯ ದೈವಗಳಿಗೆ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ಅಷ್ಟಪವಿತ್ರ ನಾಗಮಂಡಲ ಸೇವೆಯು ಜರುಗಲಿದೆ. ಎ.27ರಿಂದ ಎ.30ರವರೆಗೆ ವಿಶೇಷ ಜಾತ್ರಾ ಮಹೋತ್ಸವ ಜರುಗಲಿದ್ದು ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.
ಇನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಈಗಾಗಲೇ ಕ್ಷೇತ್ರಕ್ಕೆ ಬ್ರಹ್ಮಕುಂಭಾಭಿಷೇಕದ ಪ್ರಧಾನ ಬೆಳ್ಳಿಯ ಕಲಶವನ್ನು ಸಮರ್ಪಿಸಿದ್ದು ಎ.25ರಿಂದ 27ರವರೆಗೆ ಜರುಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಮಧುಕರ್ ಅಮೀನ್ ಮಾತನಾಡಿ, “ಕ್ಷೇತ್ರದಲ್ಲಿ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳು ವೇಗಗತಿಯಲ್ಲಿ ನಡೆಯುತ್ತಿದೆ. ದೈವಕ್ಕೆ 2 ಕೋಟಿ ಮೌಲ್ಯದ ಸ್ವರ್ಣ ಪಲ್ಲಕ್ಕಿಯನ್ನು ಎ.19 ರಂದು ಶ್ರೀ ಕ್ಷೇತ್ರ ಕಟೀಲಿನಿಂದ ಸಂಜೆ 4 ಗಂಟೆಗೆ ವಿಜೃಂಭಣೆಯ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಊರ ಪರವೂರ ಭಕ್ತರು ಸೇವೆಯ ರೂಪದಲ್ಲಿ ಸಲ್ಲಿಸಲಿದ್ದಾರೆ. ರಸ್ತೆ ಅಭಿವೃದ್ಧಿ ಮತ್ತು ನೂತನ ಗೋಪುರ ನಿರ್ಮಾಣ ಮತ್ತು ಸುತ್ತುಪೌಳಿ ಕಾಮಗಾರಿ ಪ್ರಗತಿಯಲ್ಲಿದೆ” ಎಂದರು.
1976ರಲ್ಲಿ ಶಿಬರೂರು ಗುತ್ತು ಮುದ್ದಣ್ಣ ಶೆಟ್ಟರ ಮುತುವರ್ಜಿಯಲ್ಲಿ ಶಿಬರೂರು ಕ್ಷೇತ್ರವು ಸಂಪೂರ್ಣ ನವೀಕರಣಗೊಂಡಿದ್ದು 2010ರಲ್ಲಿ ಕೊಂಜಾಲಗುತ್ತು ಪ್ರಭಾಕರ ಶೆಟ್ಟರ ನೇತೃತ್ವದಲ್ಲಿ ಹಾಗೂ ಊರವರ ಸಹಕಾರದಿಂದ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡು ಈಗ ಮತ್ತೊಮ್ಮೆ ನೂತನ ಧ್ವಜಸ್ತಂಭ ಸಹಿತ ಸುತ್ತುಪೌಳಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷ ಕೈಗೊಂಡಿದ್ದು ಪುನರ್ ನಿರ್ಮಾಣ ನಡೆಯುತ್ತಿದೆ” ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಏಳಿಂಜೆ ಕೋಂಜಾಲಗುತ್ತು ಪ್ರಭಾಕರ ಎಸ್. ಶೆಟ್ಟಿ, ತುಕಾರಾಮ ಶೆಟ್ಟಿ ಪರ್ಲಬೈಲುಗುತ್ತು, ಪ್ರಧಾನ ಸಂಚಾಲಕ ಸುಬ್ರಮಣ್ಯ ಪ್ರಸಾದ್ ಕೋರ್ಯಾರು, ಮಾಧ್ಯಮ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಶಿವಾನಂದ ಶೆಟ್ಟಿ ಪಡುಮನೆ, ಸುಧಾಕರ ಶೇಣವ ದೇಂದೊಟ್ಟುಗುತ್ತು, ಸುಧಾಕರ ಸಾಲ್ಯಾನ್, ಜಿತೇಂದ್ರ ಶೆಟ್ಟಿ, ಸುಮನ್ ಶೆಟ್ಟಿ, ಶ್ಯಾಮಲಾ ಪ್ರಭಾಕರ ಶೆಟ್ಟಿ, ಜಗದೀಶ ಶೆಟ್ಟಿ ಪರ್ಲಬೈಲು, ದಯಾನಂದ ದೇವಾಡಿಗ, ಭುವನಾಭಿರಾಮ ಉಡುಪ, ಸುರೇಂದ್ರ ಕೆ.ಶೆಟ್ಟಿ ದೇಂದೊಟ್ಟು, ವಿನೀತ್ ಶೆಟ್ಟಿ, ವಿಜೇಶ್ ಶೆಟ್ಟಿ, ಚಂದ್ರಹಾಸ ಸಾಲ್ಯಾನ್, ಮೊಕ್ತೇಸರ ಕಾಂತಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.