ಅನಿವಾಸಿ ಭಾರತೀಯರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರಕಾರದಿಂದ ಪ್ರತ್ಯೇಕ ಸಚಿವಾಲಯ: ಡಾ. ಆರತಿ ಕೃಷ್ಣ

ಉಡುಪಿ ಎ.15: ಕರ್ನಾಟಕ ಸರಕಾರದಿಂದ ಅನಿವಾಸಿ ಭಾರತೀಯರ ಸುರಕ್ಷತೆ ಹಾಗೂ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಲಾಗುವುದು ಎಂದು ಕಾಂಗ್ರೆಸ್ ಅನಿವಾಸಿ ಭಾರತೀಯ ಸಮಿತಿಯ ಕರ್ನಾಟಕ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಮಿತಿಗೆ ಸಾಧ್ಯವಾಗಿಲ್ಲ. ಅಲ್ಲದೆ, ಬಿಜೆಪಿ ಸರ್ಕಾರವು ಕೋವಿಡ್ ಸಂದರ್ಭದಲ್ಲಿ ಸಮಿತಿಯ ಉದ್ದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ಸರಿಪಡಿಸಿ ಅನಿವಾಸಿ ಭಾರತೀಯರಿಗೆ ಸ್ಪಂದಿಸಿದೆ ಎಂದು ಹೇಳಿದರು.

ಹಾಗೂ ಅನಿವಾಸಿ ಭಾರತೀಯರು ಯಾವುದೇ ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಅವರನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಪ್ರತ್ಯೇಕ ಅನಿವಾಸಿ ಭಾರತೀಯ ಸಚಿವಾಲಯ ಸ್ಥಾಪಿಸುವುದು ಅತ್ಯಗತ್ಯ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯವನ್ನು ವಿದೇಶಾಂಗ ಸಚಿವಾಲಯದಿಂದ ಬೇರ್ಪಡಿಸುವ ಭರವಸೆ ನೀಡಿದೆ. ಅಲ್ಲದೆ, ವಿಶೇಷವಾಗಿ ಅರಬ್ ದೇಶಗಳ ಅನಿವಾಸಿ ಭಾರತೀಯರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಬದ್ಧವಾಗಿದೆ. ಭಾರತದಲ್ಲಿ ಕುಟುಂಬವನ್ನು ಬಿಟ್ಟು ವಿದೇಶದಲ್ಲಿ ದುಡಿಯುತ್ತಿರುವ ಆ ಕುಟುಂಬಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಸರಕಾರದ್ದಾಗಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿರುವ ದೇಶಗಳಿಗೆ ಮಂಗಳೂರು ಅಂತಾರಾಷ್ಟ್ರೀಯ ನಿಮಾನ ನಿಲ್ದಾಣದಿಂದ ನೇರ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಈ ಕುಟುಂಬಗಳಿಗೆ ಪ್ರಯೋಜನಗಳನ್ನು ಸೃಷ್ಟಿಸಲು ಸರ್ಕಾರವು ನಾನಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!