ಬೆಂಗಳೂರು: ಅನಂತಕುಮಾರ್ ಪ್ರತಿಷ್ಠಾನದಿಂದ “ದೇಶ ಮೊದಲು” ವೆಬಿನಾರ್ ಸರಣಿಯ ಎರಡನೇ ಸಂವಾದ
ಬೆಂಗಳೂರು : ಆಧುನಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತರ್ಕದ ಸಮ್ಮಿಳನದಿಂದ ಪರಿಸರ ಸಂರಕ್ಷಣೆಯನ್ನು ಸಾಧಿಸಲು ಸಾಧ್ಯವಿದ್ದು, ಕೇವಲ ಆಧುನಿಕತೆಯನ್ನು ವಿರೋಧಿಸುವುದರಿಂದಲೇ ಪರಿಸರ ಸಂರಕ್ಷಣೆಯಾಗಲಾರದು ಎಂದು ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ವೈಜ್ಞಾನಿಕ ಆಯಾಮವನ್ನು ನೀಡಿದ ಸಂಶೋಧಕ ಜೀವಶಾಸ್ತ್ರಜ್ಞರಾದ ಉಲ್ಲಾಸ್ ಕಾರಂತ್ ಅಭಿಪ್ರಾಯಪಟ್ಟರು.
ಅಭಿವೃದ್ದಿ ಹಾಗೂ ಸಂರಕ್ಷಣೆಯಲ್ಲಿ ಸಮತೋಲನ – ನೀತಿ ನಿರೂಪಣೆಯಲ್ಲಿ ವೈಜ್ಞಾನಿಕ ವಿಧಾನದ ಬಳಕೆ ಎಂಬ ವಿಚಾರದ ಕುರಿತು ಅನಂತಕುಮಾರ್ ಪ್ರತಿಷ್ಠಾನ ಬೆಂಗಳೂರಿನಲ್ಲಿ ಆಯೋಜಿಸಿದ್ದ “ದೇಶ ಮೊದಲು” ವೆಬಿನಾರ್ ಸಂವಾದದ ಎರಡನೆಯ ಸರಣಿಯನ್ನು ಎರಡನೇ ಸರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿಯ ಜೊತೆಯಲ್ಲಿ ಸಂರಕ್ಷಣೆ ಸಾಧ್ಯವಿದೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿದೆ. ಉದಾಹರಣೆಗೆ, ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ಕಳೆದ ಎರಡು ದಶಕಗಳಲ್ಲಿ ನಗರೀಕರಣ, ಕೈಗಾರಿಕೀಕರಣ ಹಾಗೂ ಅಭಿವೃದ್ದಿಯಿಂದ ಹುಲಿಯ ಜನಸಂಖ್ಯೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. 1950 ರ ದಶಕದಲ್ಲಿ ಬೇಟೆ, ಮರಹನನ ವ್ಯಾಪಕವಾಗಿದ್ದ ಕಾಲದಲ್ಲಿ ದಕ್ಷಿಣ ಕನ್ನಡದ ಕಾಡುಗಳಲ್ಲಿ ಕೆಲವೇ ಹುಲಿಗಳಿದ್ದವು. ಮುಂದಿನ ವರ್ಷಗಳಲ್ಲಿ ಹುಲಿಯನ್ನು ಕಾಡಿನಲ್ಲಿ ಕಾಣಲು ಸಾಧ್ಯವೇ ಇಲ್ಲ ಎಂದು ಯಾರಾದರೂ ಹೇಳಬಹುದಾದ ಸ್ಥಿತಿಯಿತ್ತು. ಆದರೆ, ಜನಸಂಖ್ಯೆ ನಾಲ್ಕೈದು ಪಟ್ಟು ಹೆಚ್ಚಿ, ಕಾಡಿನ ವಿಸ್ತಾರ ಕಡಿಮೆಯಾಗಿರುವ ವರ್ತಮಾನದ ಸಂದರ್ಭದಲ್ಲೂ ನೀವು ಅಳಿದುಳಿದಿರುವ ಕಾಡುಗಳಲ್ಲಿ ಹುಲಿಗಳನ್ನು ನೋಡಬಹುದಾಗಿದೆ. ಎಂದಮೇಲೆ, ಅಭಿವೃದ್ಧಿ ಮತ್ತು ಸಂರಕ್ಷಣೆ ಜೊತೆಗೂಡಿ ಸಾಗಬಹುದಾಗಿದೆ ಎಂದಾಯಿತು.
ಕೇವಲ ಅಭಿವೃದ್ದಿ ಹಾಗೂ ಕೈಗಾರಿಕರಣವನ್ನು ಕಡಿಮೆ ಮಾಡುವುದರಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎನ್ನುವ ವಾದ ಸರಿಯಲ್ಲ. ಆಧುನಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತರ್ಕದ ಸಮ್ಮಿಳನದಿಂದ ಪರಿಸರ ಸಂರಕ್ಷಣೆಯನ್ನು ಸಾಧಿಸಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಇವುಗಳ ಸಮರ್ಥವಾದ ಬಳಕೆಯನ್ನು ನಾವು ಉತ್ತೇಜಿಸಬೇಕಾಗಿದೆ. ಅರಣ್ಯ ಪರಿಸರಸಂರಕ್ಷಣೆಯೆನ್ನುವುದು ಅಭಿವೃದ್ಧಿಗೆ ವಿರೋಧಿಯಲ್ಲ. ಸರಿಯಾದ ತರ್ಕ, ವಿಜ್ಞಾನಗಳನ್ನು ಬಳಸಿ ಸಕಾರಣವಾಗಿ ಯೋಜನೆಗಳನ್ನು ರೂಪಿಸಿದಾಗ, ಪರಿಸರಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿದೆ. ಅರಣ್ಯ , ಪರಿಸರಗಳ ಸಂರಕ್ಷಣೆಯೆನ್ನುವುದು ಅಭಿವೃದ್ಧಿಯ ಚಾಲನೆಗೆ ಪೂರಕವಾದ ಅಂಶ. ಈಗ ಕೇವಲ ಶೇಕಡಾ ಎರಡೂವರೆಯಷ್ಟು ಭೂಪ್ರದೇಶದಲ್ಲಿ ಉಳಿದುಕೊಂಡಿರುವ ಜೀವವೈವಿಧ್ಯ ಪ್ರದೇಶಗಳನ್ನೂ ಅಭಿವೃದ್ಧಿಯ ಹೆಸರಿನಲ್ಲಿ ನಾಶಪಡಿಸುವ ಹುನ್ನಾರವನ್ನು ಮಾತ್ರವೇ ಆಕ್ಷೇಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು .
ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಅಭಿವೃದ್ದಿ ಮತ್ತು ಪರಿಸರ ಎರಡು ಪರಸ್ಪರ ಪೂರಕವಾಗಿರಬೇಕೇ ಹೊರತು ವಿರೋಧವಾಗಲ್ಲ. ಇವೆರಡರ ಸಮ್ಮಿಳನದಿಂದ ಮಾತ್ರ ನಾವು ಆರ್ಥಿಕವಾಗಿ ಅಭಿವೃದ್ದಿ ಹಾಗೂ ನೈಸರ್ಗಿಕ ಸಂಫತ್ತನ್ನು ರಕ್ಷಿಸುವ ಕೆಲಸವನ್ನು ಮಾಡಬಹುದಾಗಿದೆ. ಅಭಿವೃದ್ದಿ ಕಾರ್ಯಕ್ರಮಗಳ ಅನುಷ್ಠಾನದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಯೋಜನೆ ತಯಾರಿಸಿಕೊಳ್ಳುವುದು ಹಾಗೂ ಅದನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂವಾದದಲ್ಲಿ ಅನಂತಕುಮಾರ್ ಪ್ರತಿಷ್ಠಾನದ ಟ್ರಸ್ಟಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು