ಉಡುಪಿ: ನ್ಯಾಯಾಲಯಗಳಲ್ಲಿ ‘ಡಿ’ ದರ್ಜೆ ಉದ್ಯೋಗ ನೀಡುವುದಾಗಿ ನಂಬಿಸಿ 70.25 ಲ.ರೂ.ವಂಚನೆ
ಗಂಗೊಳ್ಳಿ ಮಾ.7(ಉಡುಪಿ ಟೈಮ್ಸ್ ವರದಿ): ನ್ಯಾಯಾಲಯಗಳಲ್ಲಿ ‘ಡಿ’ ದರ್ಜೆಯ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು 70.25 ಲಕ್ಷ ರೂ ವಂಚಿಸಿರುವುದಾಗಿ ಓರ್ವ ವ್ಯಕ್ತಿಯ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ನ್ಯಾಯಾಲಯಗಳಲ್ಲಿ ‘ಡಿ’ ದರ್ಜೆ ಯ ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದ್ದು, ಉದ್ಯೋಗ ಕೊಡಿಸುವುದಾಗಿ ನಂಬಿಸಿ 2022 ರ ಜೂ.10 ರಂದು 6.5 ಲಕ್ಷ ರೂ ಹಣವನ್ನು ನಗದಾಗಿ ಪಡೆದುಕೊಂಡಿದ್ದ. ಅಲ್ಲದೆ ಮತ್ತೆ 6 ದಿನಗಳ ಬಳಿಕ 3 ಲಕ್ಷ ಹಣವನಯ ಆರೋಪಿ ದಯಾನಂದ ಸೂಚಿಸಿದ ಖಾತೆಗೆ ವರ್ಗಾವಣೆ ಮಾಡಿದ್ದರು.
ಇದೇ ರೀತಿ ಸುಶೀಲಾ ಎಂಬುವವರು 5.5 ಲಕ್ಷ , ರತ್ನಾಕರ ಎಂಬುವವರು 14 ಲಕ್ಷ, ದಿನೇಶ ಎಂಬುವವರು 16 ಲಕ್ಷ, ಪದ್ಮನಾಭ ಎಂಬುವವರು 7.25 ಲಕ್ಷ, ವಿಘ್ನೇಶ ರವರು 2 ಲಕ್ಷ, ಸುದೀಪ ರವರು 7 ಲಕ್ಷ, ಮಂಜುನಾಥ ರವರು 3 ಲಕ್ಷ , ಅಭಿಷೇಕ ರವರು 2 ಲಕ್ಷ, ಸೌರಭ್ ಹಾಗೂ ಸೃಸ್ತಿಕ್ ರವರು ತಲಾ 2 ಲಕ್ಷ ರೂ ಹಣವನ್ನು ಆರೋಪಿಗೆ ನೀಡಿದ್ದರು.
ಆ ಬಳಿಕ ದೀಪಕ್ ರವರಿಗೆ 2023 ರ ಡಿ.20 ರಂದು ಕೆಲಸಕ್ಕೆ ನೇಮಕಾತಿ ಯ ನೋಟಿಪಿಕೇಶನ್ ಹಾಗೂ ಲಿಸ್ಟ್ ಆಫ್ ಕ್ಯಾಂಡಿಡೇಟ್ ಸೆಲೆಕ್ಟೆಡ್, ಎಂಬ 2 ಜೆರಾಕ್ಷ್ ಪ್ರತಿಗಳನ್ನು ನೀಡಿದ್ದು, ಈ ಬಗ್ಗೆ ಆನ್ ಲೈನ್ ನಲ್ಲಿ ಬಂದ ನೇಮಕಾತಿಯ ನಿಜವಾದ ಲಿಸ್ಟ್ ನೋಡಿ ಅದರಲ್ಲಿ ತನ್ನ ಹಾಗೂ ಇತರರ ಹೆಸರು ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕಾರಣ ವಿಚಾರಿಸಿದಾಗ ಹೈಕೋರ್ಟ್ನಿಂದ ಬೇರೆಯೇ ಲಿಸ್ಟ್ ಬರುವುದಾಗಿ ಆರೋಪಿ ನಂಬಿಸಿದ್ದ. ನಂತರ ಅಪಾಯಿಂಟ್ ಮೆಂಟ್ ಕ್ಯಾಂಡಿಡೇಟ್ ಪ್ಲೇಸ್ ಮೆಂಟ್ ಲಿಸ್ಟ್ ಎಂಬ ಜೆರಾಕ್ಸ್ ಪ್ರತಿಯನ್ನು ನೀಡಿದ್ದು ಅದರಲ್ಲಿ ದಿನಾಂಕ 07/09/2023 ಎಂಬುದಾಗಿ ಇದ್ದ ಬಗ್ಗೆ ವಿಚಾರಿಸಿದಾಗ, ಆರೋಪಿಯು ಇದನ್ನು ನೇರವಾಗಿ ಹೈ ಕೋರ್ಟ್ನಿಂದ ಪಡೆದುಕೊಂಡಿದ್ದು, ಆ ದಿನಾಂಕದಂದು ಉಡುಪಿ ಕೋರ್ಟ್ಗೆ ಹೋಗಿ ದಾಖಲೆಗಳನ್ನು ಹಾಜರುಪಡಿಸಬೇಕಾಗಿ ತಿಳಿಸಿರುತ್ತಾರೆ. ಈ ನಡುವೆ ದೀಪಕ್ ಅವರಿಗೆ ತಾವು ಮೋಸ ಹೋಗಿರುವುದು ಅರಿವಾಗಿ ಹಣವನ್ನು ವಾಪಾಸು ನೀಡಲು ಕೇಳಿದಾಗ ಆರೋಪಿತನು ತನ್ನ ಹೆಂಡತಿ ಭವಾನಿ ಎಂಬುವವರ ಹೆಸರಿನ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ಜಾಗದ ಜಿಪಿಎ ಪತ್ರವನ್ನು ದೀಪಕ್ ಹಾಗೂ ರತ್ನಾಕರ ರವರಿಗೆ ಜಿಪಿಎ ಮಾಡಿ ನೀಡಿದ್ದಲ್ಲದೇ 6.5 ಲಕ್ಷ ರೂ ಮೌಲ್ಯದ ಚೆಕ್ ನೀಡಿದ್ದನು.
ಅದರಂತೆ ಆರೋಪಿಯು ನ್ಯಾಯಾಲಯಗಳಲ್ಲಿ ‘ಡಿ’ ದರ್ಜೆಯ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಹಣವನ್ನು ಪಡೆದು ವಂಚನೆ ಮಾಡಿದ್ದಲ್ಲದೇ, ಆರೋಪಿತನು ತನ್ನ ಹೆಂಡತಿ ಭವಾನಿ ಜೊತೆ ಸೇರಿಕೊಂಡು ಕುಂದಾಪುರದ ನೋಟರಿ ವಕೀಲರ ಮೂಲಕ ಜಾಗದ ಜಿಪಿಎ ಮಾಡಿಕೊಟ್ಟು, ಜಾಗವನ್ನು ವರ್ಗಾಯಿಸದೇ ಒಟ್ಟು 70.25 ಲಕ್ಷ ರೂ ಹಣ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.