ಬ್ರಹ್ಮಾವರ: ಎಂಸಿಸಿ ಬ್ಯಾಂಕ್ ಲಿ.17ನೇ ಶಾಖೆ ಉದ್ಘಾಟನೆ
ಬ್ರಹ್ಮಾವರ, ಮಾ.3: ವಾರಂಬಳ್ಳಿಯ ಆಕಾಶವಾಣಿ ವೃತ್ತದ ಸಮೀಪದ ಶೇಷಗೋಪಿ ಪ್ಯಾರಡೈಸ್ನಲ್ಲಿ ಎಂಸಿಸಿ ಬ್ಯಾಂಕ್ ಲಿಮಿಟೆಡ್ನ 17ನೇ ಶಾಖೆಯು ಇಂದು ಉದ್ಘಾಟನೆಗೊಂಡಿತು.
ನೂತನ ಶಾಖೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಭಾರತೀಯ ರಿಸರ್ವ್ ಬ್ಯಾಂಕ್ನ ಕಟ್ಟುನಿಟ್ಟಿನ ನಿಯಮಗಳು ಮತ್ತು ನಿಬಂಧನೆಗಳಿಂದಾಗಿ ಸಹಕಾರಿ ಕ್ಷೇತ್ರವು ತುಂಬಾ ಸುಲಭವಾಗಿ ಏಳಿಗೆಯಾಗಿದೆ. ಆದರೆ, ಇನ್ನೂ ಆರೋಗ್ಯಕರ ಪೈಪೋಟಿ ಮತ್ತು ಜನರ ವಿಶ್ವಾಸದಿಂದ ನಮ್ಮ ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಅರಳಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ನ ಅಧ್ಯಕ್ಷ ‘ಸಹಕಾರ ರತ್ನ’ ಅನಿಲ್ ಲೋಬೊ ಅವರು ಮಾತನಾಡಿ, ರಾಷ್ಟ್ರೀಕೃತ ಮತ್ತು ಇತರೆ ವಾಣಿಜ್ಯ ಬ್ಯಾಂಕ್ಗಳಿಗೆ ಸಮಾನವಾಗಿ ಎಂಸಿಸಿ ಬ್ಯಾಂಕ್ನಲ್ಲಿ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಲಭ್ಯವಿದೆ. ಗ್ರಾಹಕರ ಅಗತ್ಯತೆ ಮತ್ತು ಆಶೋತ್ತರಗಳಿಗೆ ಬ್ಯಾಂಕ್ ಸ್ಪಂದಿಸುತ್ತಿದೆ. ಗ್ರಾಹಕರ ಬ್ಯಾಂಕಿಂಗ್ ಅಗತ್ಯಗಳಿಗೆ ಆದ್ಯತೆ ನೀಡುವ ಮೂಲಕ ಹೆಚ್ಚು ಗ್ರಾಹಕರನ್ನು ಕೇಂದ್ರಿತವಾಗಿಸಲು ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು ಹಾಗೂ 112 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಬ್ಯಾಂಕನ್ನು ಬೆಂಬಲಿಸುವಂತೆ ಗ್ರಾಹಕರಿಗೆ ಕರೆ ನೀಡಿದರು.
ಇದೇ ವೇಳೆ ಅವರು ಬ್ಯಾಂಕ್ನ 1000 ಕೋಟಿ ವ್ಯವಹಾರ ವಹಿವಾಟಿನ ಮೈಲಿಗಲ್ಲು ಸಾಧನೆ ಮತ್ತು ಈ ಸಂದರ್ಭದಲ್ಲಿ ಪರಿಚಯಿಸಲಾದ ಕೊಡುಗೆಗಳ ಕುರಿತು ಮಾಹಿತಿ ನೀಡಿದರು.
ಫಾ. ಜಾನ್ ಫೆರ್ನಾಂಡಿಸ್ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಗ್ರಾಹಕ ಸ್ನೇಹಿ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಮತ್ತು ಬ್ಯಾಂಕಿನ ಬೆಳವಣಿಗೆಯತ್ತ ಅಧ್ಯಕ್ಷರ ದೂರದೃಷ್ಟಿ ಮತ್ತು ನಾಯಕತ್ವವನ್ನು ಅವರು ಶ್ಲಾಘಿಸಿದರು.
ಉಡುಪಿ ಧರ್ಮಪ್ರಾಂತ್ಯದ ಕ್ಯಾಥೋಲಿಕ್ ಎಜುಕೇಶನಲ್ ಸೊಸೈಟಿ (ಸಿಇಎಸ್ಯು) ಕಾರ್ಯದರ್ಶಿ ಫಾದರ್ ವಿನ್ಸೆಂಟ್ ಕ್ರಾಸ್ತಾ ಅವರು ನಿರ್ಗತಿಕರಿಗೆ ಇರುವ ದತ್ತಿ ನಿಧಿ ವಿತರಿಸಿದರು. ಹಾಗೂ ಕಳೆದ 6 ವರ್ಷಗಳಲ್ಲಿ ಬ್ಯಾಂಕ್ನ ಅಗಾಧ ಬೆಳವಣಿಗೆಗೆ ಅಭಿನಂದನೆ ಸಲ್ಲಿಸಿದ ಅವರು, ಬಡವರು ಮತ್ತು ದೀನದಲಿತರ ಮೇಲೆತ್ತಲು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಬ್ಯಾಂಕ್ಗೆ ಕರೆ ನೀಡಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಪಿಆರ್ಒ ಫಾ.ಡೆನಿಸ್ ಡೆ’ಸಾ ಅವರು ಮಾತನಾಡಿ ಬ್ರಹ್ಮಾವರದಲ್ಲಿ 17ನೇ ಶಾಖೆಯನ್ನು ಆರಂಭಿಸಿದ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಸವಾಲುಗಳಿದ್ದು, ಸಿಬ್ಬಂದಿಗಳು ಹೆಚ್ಚು ಜಾಗರೂಕರಾಗಿ ರಬೇಕು ಮತ್ತು ಅತ್ಯುತ್ತಮ ಗ್ರಾಹಕ ಸೇವೆಯನ್ನು ನೀಡಬೇಕೆಂದು ಅವರು ಕರೆ ನೀಡಿದರು. ಬ್ಯಾಂಕ್ ವ್ಯವಹಾರವನ್ನು ಸುಧಾರಿಸಲು ಸಾರ್ವಜನಿಕ ಸಂಪರ್ಕ ಮತ್ತು ಮಾರುಕಟ್ಟೆಗೆ ಆದ್ಯತೆ ನೀಡಬೇಕು. ಬ್ರಹ್ಮಾವರ ಸುತ್ತಮುತ್ತಲಿನ ನಾಗರಿಕರು ಬ್ಯಾಂಕಿನ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಇದೇ ವೇಳೆ ನಿವೇಶನ ಒದಗಿಸಿದ ಚಂದಯ್ಯ ಶೆಟ್ಟಿ ಹಾಗೂ ನೂತನ ಆವರಣದಲ್ಲಿ ಉತ್ತಮ ಕೆಲಸ ಮಾಡಿದ ಸಿವಿಲ್ ಇಂಜಿನಿಯರ್ ಕಾರ್ತಿಕ್ ಕಿರಣ್ ಅವರನ್ನು ಹಾಗೂ ಕ್ಷೇತ್ರದ ಪ್ರಮುಖರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ನ ಧರ್ಮಗುರುಗಳಾದ ಫಾ.ಜಾನ್ ಫೆರ್ನಾಂಡಿಸ್ ಅವರು ಆಶೀರ್ವಚನ ನೀಡಿದರು. ಬ್ರಹ್ಮಾವರದ ಎಸ್ಎಂಒಎಸ್ ಕೆಥೆಡ್ರಲ್ನ ವಿಕಾರ್ ಜನರಲ್ ಮತ್ತು ಬ್ರಹ್ಮಾವರದ ಒಎಸ್ಸಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಫಾದರ್ ಎಂ ಸಿ ಮಥಾಯಿ ಅವರು ಸುರಕ್ಷಿತ ಕೊಠಡಿಯನ್ನು ಉದ್ಘಾಟಿಸಿದರು. ಇ-ಸ್ಟಾಂಪಿಂಗ್ ಸೌಲಭ್ಯವನ್ನು ಉಡುಪಿ ಧರ್ಮಪ್ರಾಂತ್ಯದ ಪ್ರೊಫೆಸರ್ ಡೆನಿಸ್ ಡಿಸಾ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಸಹಕಾರ ರತ್ನ’ ಅನಿಲ್ ಲೋಬೋ ವಹಿಸಿದ್ದರು.
ಈ ವೇಳೆ ಕೊಂಕಣಿ ಲೇಖಕ ಸಂಘವು ನೀಡುವ ಸಾಹಿತ್ಯ ಪ್ರಶಸ್ತಿ 2024ನ್ನು ಬ್ಯಾಂಕಿನ ನಿರ್ದೇಶಕರಾದ ಡಾ.ಜೆರಾಲ್ಡ್ ಪಿಂಟೋ (ಗೆರಿ ನಿಡ್ಡೋಡಿ) ಅವರಿಗೆ ನೀಡಿ ಅಧ್ಯಕ್ಷ ಅನಿಲ್ ಲೋಬೋ ಗೌರವಿಸಿದರು.
ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವಾ, ಆಂಡ್ರ್ಯೂ ಡಿಸೋಜಾ, ಹೆರಾಲ್ಡ್ ಜಾನ್ ಮೊಂತೇರೊ, ಡೇವಿಡ್ ಡಿಸೋಜಾ, ಮೆಲ್ವಿನ್ ಅಕ್ವಿನಾಸ್ ವಾಸ್, ಸುಶಾಂತ್ ಸಲ್ಡಾನ್ಹಾ, ಅನಿಲ್ ಪತ್ರಾವೊ, ರೋಶನ್ ಡಿಸೋಜಾ, ಫೆಲಿಕ್ಸ್ ಡಿಕ್ರೂಜ್, ಅಲ್ವಿನ್ ಪಿ.ಮೊಂತೇರೊ, ಶರ್ಮಿಳಾ ಮಿನೇಜಸ್, ಬ್ರಹ್ಮಾವರದ ಎಸ್ಎಂಒಎಸ್ ಕ್ಯಾಥೆಡ್ರಲ್ನ ವಿಕಾರ್ ಜನರಲ್ ಮತ್ತು ಬ್ರಹ್ಮಾವರದ ಒಎಸ್ಸಿ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಫಾದರ್ ಎಂ ಸಿ ಮಥಾಯಿ, ಕ್ಷೇತ್ರದ ಸಾಧಕರಾದ ಡೇನಿಯಲ್, ಗೋಪಾಲ್ ಖಾರ್ವಿ, ಅಶೋಕ್ ಕುಮಾರ್ ಶೆಟ್ಟಿ, ಪ್ರಕಾಶ್ ಕಹ್ರ್ವಿ ಮತ್ತು ಕಿರಣ್ ರಾಹುಲ್ ಫೆರ್ನಾಂಡಿಸ್, ವಾರಂಬಳ್ಳಿ ಗ್ರಾ.ಪಂ. ಅಧ್ಯಕ್ಷರಾದ ನಿತ್ಯಾನಂದ ಬಿ.ಆರ್., ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾದ ಜನಾಬ್ ಕೆ.ಪಿ.ಇಬ್ರಾಹಿಂ, ಜನರಲ್ ಮ್ಯಾನೇಜರ್ ಸುನಿಲ್ಮೆಮೆನೇಜಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ನಿರ್ದೇಶಕ ಡಾ.ಜೆರಾಲ್ಡ್ ಪಿಂಟೋ ವಂದಿಸಿದರು. ಚಂದ್ರಶೇಖರ ಬಿಜಾಡಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕಿನ ನಿರ್ದೇಶಕ ಎಲ್ರೋಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು.