ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ-ಪೋಸ್ಟರ್ ಅಂಟಿಸಿದ್ದ ಯುವಕರ ವಿರುದ್ಧ ಪ್ರಕರಣ
ಚಿಕ್ಕಮಗಳೂರು ಫೆ.26 : ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ ವಿಚಾರವಾಗಿ ಪೋಸ್ಟರ್ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೋಭಕ್ಕ ಎಲ್ಲಿದ್ದೀರ?, ಶೋಭಕ್ಕ ಕಾಣೆ ಎಂದು ತರೀಕೆರೆಯಿಂದ ಚಿಕ್ಕಮಗಳೂರುವರೆಗೂ ರಾತ್ರೋರಾತ್ರಿ ಪೋಸ್ಟರ್ಗಳನ್ನು ಅಂಟಿಸಿದ್ದ ತರೀಕೆರೆ ಮೂಲದ ನಾಲ್ವರು ಯುವಕರಾದ ಸಂಜು, ಸಂಜಯ್, ವಿಷ್ಣು, ಚಂದ್ರಶೇಖರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಗರ ಸಭೆ ಪೌರ ಕಾರ್ಮಿಕ ನೀಡಿದ ದೂರಿನ ಮೇರೆಗೆ ಎಫ್.ಐ.ಆರ್ ದಾಖಲಾಗಿದ್ದು, ಯುವಕರು ಹಣ ನೀಡಿ ಪೋಸ್ಟರ್ ಅಂಟಿಸಲು ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದ ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕಳೆದ ಜ.1 ರಿಂದ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಅಭಿಯಾನ ಆರಂಭ ಮಾಡಿದ್ದಾರೆ. ಶೋಭಾ ವಿರುದ್ಧ ಗೋ ಬ್ಯಾಕ್ ಶೋಭಾ, ಶೋಭಾ ಹಠಾವೋ ಬಿಜೆಪಿ ಬಚಾವೋ ಅಭಿಯಾನ ನಡೆಯುತ್ತಿದೆ. ಈ ವಿಚಾರವಾಗಿ ಪೋಸ್ಟರ್ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬಸವನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.