ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ 90% ಮನೆಯ್ಲಲಿಯೇ ಚೇತರಿಕೆ ಸಾಧ್ಯ: ಡಾ. ರಣದೀಪ್ ಗುಲೇರಿಯಾ
ನವದೆಹಲಿ ಎ.26: ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ 90% ದಷ್ಟು ಕೊರೋನಾ ಸೊಂಕಿತರು ಮನೆಯಲ್ಲಿಯೇ ಚೇತರಿಸಿಕೊಳ್ಳಬಹುದು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ವೈದ್ಯರೊಂದಿಗೆ ನಡೆಸಿದ ಸಭೆಯ ಬಳಿಕ ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಮಾಹಿತಿ ನೀಡಿ, ಕೋವಿಡ್ ಸೋಂಕು ಒಂದು ಸಾಮಾನ್ಯ ಸೋಂಕು ಆಗಿದೆ. 85 ರಿಂದ 90 ರಷ್ಟು ಸೋಂಕಿತರು ಜ್ವರ, ಶೀತ, ದೇಹದ ನೋವು ಮತ್ತು ಕೆಮ್ಮಿನಂತಹ ಸಾಮಾನ್ಯ ಲಕ್ಷಣಗಳಿಗೆ ಒಳಗಾಗಿದ್ದಾರೆ. ಮತ್ತು ಈ ಸಂದರ್ಭಗಳಲ್ಲಿ, ಒಬ್ಬರಿಗೆ ರೆಮ್ಡೆಸಿವಿರ್ ಅಗತ್ಯವಿಲ್ಲ. ಈ ಸಾಮಾನ್ಯ ಸೋಂಕುಗಳಿಗೆ ನೀವು ಔಷಧಿಗಳನ್ನು ತೆಗೆದುಕೊಳ್ಳಬಹುದು ಅಥವಾ ಮನೆಮದ್ದು ಮತ್ತು ಯೋಗದ ಮೂಲಕ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದಾರೆ.
ಕೊರೋನಾ ಸೋಂಕಿತರು ಸಾಮಾನ್ಯ ಸ್ಥಿತಿಗೆ ಮರಳಲು ಏಳು ಅಥವಾ 10 ದಿನಗಳು ಬೇಕಾಗಬಹುದು. ಶೇಕಡಾ 10-15 ರಷ್ಟು ಜನರು ತೀವ್ರ ಕೊರೋನ ಸೋಂಕಿಗೆ ಸಾಕ್ಷಿಯಾಗಬಹುದು ಮತ್ತು ಇವರಿಗೆ ರೆಮ್ಡೆಸಿವಿರ್, ಆಮ್ಲಜನಕ ಅಥವಾ ಪ್ಲಾಸ್ಮಾದಂತಹ ಹೆಚ್ಚುವರಿ ಔಷಧಿಗಳ ಅಗತ್ಯವಿರುತ್ತದೆ. ಶೇಕಡಾ 5 ಕ್ಕಿಂತ ಕಡಿಮೆ ರೋಗಿಗಳಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಸದ್ಯ ಜನರಲ್ಲಿ ಕೊರೋನಾದ ಕುರಿತು ಭಯದ ವಾತವಾರಣವನ್ನು ನಿರ್ಮಾಣವಾಗಿದ್ದು, ಇದು ಆಮ್ಲಜನಕದ ಅನಗತ್ಯ ಕೊರತೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಸರಿಯಾದ ಸಮಯಕ್ಕೆ ಸರಿಯಾದ ಔಷಧಿಗಳನ್ನು ನೀಡಿದರೆ ರೋಗಿಗಳು ಮನೆಯಲ್ಲಿಯೇ ಚೇತರಿಸಿಕೊಳ್ಳಬಹುದು ಎಂದಿದ್ದಾರೆ. ಇದೇ ವೇಳೆ ‘ನಿಮ್ಮ ಆರ್ ಟಿ-ಪಿಸಿಆರ್ ವರದಿಯು ಪಾಸಿಟಿವ್ ಬಂದ ಕೂಡಲೇ, ನೀವು ಸಂಪರ್ಕದಲ್ಲಿರುವ ಸ್ಥಳೀಯ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.