ಬೈಂದೂರು:ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಯತ್ನ- ಮೂವರು ವಶಕ್ಕೆ, ನಾಲ್ವರು ಪರಾರಿ
ಬೈಂದೂರು ಫೆ.22(ಉಡುಪಿ ಟೈಮ್ಸ್ ವರದಿ): ಮಾರಕಾಸ್ತ್ರಗಳನ್ನು ಹಿಡಿದುಕೊಂಡು ವಾಹನಗಳನ್ನು ಅಡ್ಡಹಾಕಿ ದರೋಡೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೈಂದೂರು ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ, ರಾಷ್ಟ್ರೀಯ ಹೆದ್ದಾರಿಯಲ್ಲಿ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿರುವ ಸಾರ್ವಜನಿಕ ವಾಹನಗಳನ್ನು ನಿಲ್ಲಿಸಲು ಯತ್ನಿಸುತ್ತಿದ್ದ 7 ಜನರ ಚಲನವಲನಗಳನ್ನು ಗಮನಿಸಿದಾಗ ಅನುಮಾನಗೊಂಡಿದ್ದು, ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆ ನಡೆದಿದ್ದ ಪ್ರಕರಣಗಳಲ್ಲಿ ಭಾಗಿಯಾದ ಚಾಳಿ ಬಿದ್ದ ಆರೋಪಿಗಳಂತೆ ಕಂಡು ಬಂದಿರುತ್ತದೆ. ಈ ವೇಳೆ ಆರೋಪಿಗಳನ್ನು ಸುತ್ತುವರೆದು ಹಿಡಿಯಲು ಹೋದಾಗ ಆರೋಪಿಗಳ ಪೈಕಿ ಚಾರು ಯಾನೆ ಶಾರುಖ್, ಚಪ್ಪು ಯಾನೆ ಶಫಾನ್, ವಾಜೀದ್ ಮತ್ತು ನಿಶಾದ್ ಇವರು ಅಲ್ಲಿಂದ ಓಡಿ ಹೋಗಿದ್ದು, ಉಳಿದ ಮಹಮ್ಮದ್ ದ್ಯಾನೀಶ್ ಮದನಿ, ಮೊಹಮ್ಮದ್ ಕೈಫ್, ಮೊಹಮ್ಮದ್ ಅದ್ನಾನ್ ಎಂಬ ಮೂವರನ್ನು ಸಿಬ್ಬಂದಿಯವರು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಈ ಬಗ್ಗೆ ವಿಚಾರಿಸಿದಾಗ ಆರೋಪಿತರು ತಾವು ಭಟ್ಕಳ ಕಡೆಯಿಂದ ಬರುವ ಸಾರ್ವಜನಿಕ ವಾಹನಗಳನ್ನು ತಡೆದು ದರೋಡೆ ಮಾಡಿ ಹಣ ಹಾಗೂ ಚಿನ್ನಾಭರಣವನ್ನು ಲೂಟಿ ಮಾಡಲು ಸಿದ್ದತೆ ಮಾಡಿಕೊಂಡು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಈ ವೇಳೆ ಪೊಲೀಸರು ಆರೋಪಿಗಳ ಬಳಿ ಇದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.