ಬ್ರಹ್ಮಾವರ: ಮಗು ಅಪಹರಣಕ್ಕೆ ಯತ್ನ
ಬ್ರಹ್ಮಾವರ ಫೆ.22(ಉಡುಪಿ ಟೈಮ್ಸ್ ವರದಿ): ಮನೆಗೆ ಬಂದ ಇಬ್ಬರು ಅಪರಿಚಿತರು ಮಹಿಳೆಯರು ಮನೆಯಲ್ಲಿದ್ದ 1 ವರ್ಷದ ಮಗುವನ್ನು ಅಪಹರಿಸಲು ಯತ್ನಿಸಿರುವ ಘಟನೆ ಬ್ರಹ್ವಾವರದ ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ.
ನಿನ್ನೆ ಬೆಳಿಗ್ಗೆ ಉಪ್ಪಿನಕೋಟೆಯ ಮಹಿಮಾ ಎಂಬವರ ಮನೆಗೆ ಬಂದ ಇಬ್ಬರು ಅಪರಿಚಿತ ಹೆಂಗಸರು ತಾವು ಬಾಂಬೆಯಿಂದ ಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಮನೆಯವರ ವಿರೋಧದ ನಡುವೆಯೂ ಸೀದಾ ಮನೆಯೊಳಗೆ ಬಂದು ಮಹೀಮಾ ಅವರ 1 ವರ್ಷದ ಹೆಣ್ಣು ಮಗುವನ್ನು ಎತ್ತಿಕೊಂಡು ಮೊಬೈಲಿನಲ್ಲಿರುವ ವಿಡಿಯೋಗಳನ್ನು ತೋರಿಸುತ್ತಾ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಕೂಡಲೇ ಮಹಿಮಾ ಅವರು ಅಪರಿಚಿತ ಹೆಂಗಸು ಎತ್ತಿಕೊಂಡು ಹೋದ ಮಗುವನ್ನು ಕರೆದುಕೊಂಡು ಬಂದಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಮಹಿಮಾ ಅವರ ಅಣ್ಣ ಬಂದಿದ್ದನ್ನು ನೋಡಿದ ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.