ಶಿರ್ವ: ವ್ಯಕ್ತಿ ನಾಪತ್ತೆ
ಶಿರ್ವ ಫೆ.19(ಉಡುಪಿ ಟೈಮ್ಸ್ ವರದಿ): ಮನೆ ಬಿಟ್ಟು ಹೋಗುತ್ತಿರುವುದಾಗಿ ತಿಳಿಸಿ ಮನೆಯಿಂದ ಹೋದ ವ್ಯಕ್ತಿ ಮನೆಯವರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿರ್ವ ಗ್ರಾಮದ ಅರಸಿಕಟ್ಟೆ ನಿವಾಸಿ ನೀಲಾನಂದ ಯಾನೆ ಸುಬ್ರಾಯ(47) ನಾಪತ್ತೆಯಾಗಿರುವವರು. ಇವರು ಅರಸಿಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ನಿನ್ನೆ ಸಂಜೆ ವೇಳೆ ನೀಲಾನಂದ ಅವರ ಮಗ ಅವರಿಗೆ ಕರೆ ಮಾಡಿದಾಗ ತಾನು ಮನಸ್ಸಿಗೆ ಬಂದ ಕಡೆ ಹೋಗುತ್ತಿದ್ದೇನೆ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಹೇಳಿ ಕರೆಯನ್ನು ಕಟ್ ಮಾಡಿದ್ದರು. ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಮನೆಯವರ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ. ಇವರ ಬಗ್ಗೆ ಸಂಬಂಧಿಕರ ಮನೆಯಲ್ಲಿ, ಆಸು ಪಾಸು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ ಎಂಬುದಾಗಿ ನಾಪತ್ತೆಯಾಗಿರುವ ನೀಲಾನಂದ ಯಾನೆ ಸುಬ್ರಾಯ ಅವರ ಮಗ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.