ಕುಂದಾಪುರ: ಟ್ರ್ಯಾಕ್ಟರ್ ನೀಡುವುದಾಗಿ ನಂಬಿಸಿ 8.15ಲಕ್ಷ ರೂ.ವಂಚನೆ
ಕುಂದಾಪುರ ಫೆ.14 (ಉಡುಪಿ ಟೈಮ್ಸ್ ವರದಿ): ಟ್ರ್ಯಾಕ್ಟರ್ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 8.15 ಲಕ್ಷ ರೂ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಹ್ಮಾವರದ ಮಂದಾರ್ತಿಯ ಚಂದ್ರ ಎಂಬವರು ಟ್ರ್ಯಾಕ್ಟರ್ ಖರೀದಿಸುವ ಸಲುವಾಗಿ ಕೋಟೇಶ್ವರದ ಜೀವನ ಯಂತ್ರ ಎಗ್ರಿ ಸೊಲ್ಯೂಷನ್ ಶೋ ರೂಂಗೆ ಹೋಗಿದ್ದರು ಹಾಗೂ ಟ್ರ್ಯಾಕ್ಟರ್ನ ಮೊತ್ತದ ಮುಂಗಡ ಹಣ 2 ಲಕ್ಷವನ್ನು ನಗದು ರೂಪದಲ್ಲಿ ಶೋ ರೂಂನ ಮುಖ್ಯಸ್ಥ ಶ್ರೀಕಾಂತ್ ಎಂಬವರಿಗೆ ನೀಡಿದ್ದರು. ಬಳಿಕ ಉಳಿದ ಮೊತ್ತ 6,15,000 ನ್ನು ಉಡುಪಿಯ ಎಚ್ಡಿಬಿ ಫೈನಾನ್ಸ್ ನಲ್ಲಿ ಸಾಲ ಪಡೆಯುವಂತೆ ಸೂಚನೆ ನೀಡಿದ್ದರು. ಅದರಂತೆ ಚಂದ್ರ ಅವರು ಸಾಲಪತ್ರಗಳಿಗೆ ಸಹಿ ಪಡೆದುಕೊಂಡು ಜೀವನ ಯಂತ್ರ ಎಗ್ರಿ ಸೊಲ್ಯೂಷನ್ ರವರಿಗೆ ಸಾಲದ ಹಣ ಮಂಜೂರು ಮಾಡಿದ್ದರು. ಈ ಬಗ್ಗೆ ಒಂದು ವಾರದ ನಂತರ ಸಂಸ್ಥೆಯಲ್ಲಿ ವಿಚಾರಿಸಿದಾಗ ಒಂದು ವಾರದ ನಂತರ ಟ್ರ್ಯಾಕ್ಟರ್ ಬರುವುದಾಗಿ ತಿಳಿಸಿ ಆ ನಂತರ ದೂರವಾಣಿ ಕರೆ ಮಾಡಿ ತಿಳಿಸುವುದಾಗಿ ಸೂಚಿಸಿದ್ದರು. ಆದರೆ ಒಂದು ತಿಂಗಳಾದರೂ ಟ್ರ್ಯಾಕ್ಟರ್ ನೀಡಿರುವುದಿಲ್ಲ. ಅಲ್ಲದೆ ಪ್ರಸ್ತುತ ಜೀವನ ಯಂತ್ರ ಎಗ್ರಿ ಸೊಲ್ಯೂಷನ್ ಶೋ ರೂಂ 6 ತಿಂಗಳಿನಿಂದ ಬಾಗಿಲು ಮುಚ್ಚಿದ್ದು ಸಂಸ್ಥೆಯ ಮುಖ್ಯಸ್ಥರಾದ ಶ್ರೀಕಾಂತ ರವರು ಮೋಸ ಮಾಡುವ ಉದ್ದೇಶದಿಂದ ಟ್ರ್ಯಾಕ್ಟರ್ ನೀಡುತ್ತೇನೆ ಎಂದು ನಂಬಿಸಿ ಹಣ ಪಡೆದುಕೊಂಡು ಟ್ರ್ಯಾಕ್ಟರ್ ನೀಡದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.