ಮಂಗಳೂರು: ಶ್ರೀರಾಮನಿಗೆ ಅವಹೇಳನ-ಸಂತ ಜೆರೋಸಾ ಶಾಲಾ ಶಿಕ್ಷಕಿ ಅಮಾನತು
ಮಂಗಳೂರು, ಫೆ.12: ಶ್ರೀರಾಮನಿಗೆ ಅವಹೇಳನ ಮಾಡಿದ ಆರೋಪದ ಮೇಲೆ ನಗರದ ಜೆಪ್ಪುನಲ್ಲಿರುವ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ.
ದೇವರಿಗೆ ಅವಹೇಳನ ಖಂಡಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಇಂದು ಪೋಷಕರು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಶಾಲೆಯ ಮುಂಭಾಗ ಜಮಾವಣೆಗೊಂಡ ಪೋಷಕರು ಶಿಕ್ಷಕಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಪ್ರತಿಭಟನಾ ನಿರತ ಪೋಷಕರ ಮುಂದೆ ಆಗಮಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕಿ ಪ್ರಭಾ ಅವರನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು.
ಅಧಿಕೃತವಾಗಿ ಲಿಖಿತವಾಗಿ ಶಾಲೆಯ ಲೆಟರ್ ಹೆಡ್ನಲ್ಲಿ ಅಮಾನತ್ತಿನ ಬಗ್ಗೆ ಸ್ಪಷ್ಟನೆ ನೀಡಲಾಗಿದ್ದು, ಮುಂದೆ ಶಿಕ್ಷಣ ಇಲಾಖೆ ಪ್ರಕರಣದ ಆಂತರಿಕ ತನಿಖೆ ನಡೆಸಲಿದೆ. ಶಿಕ್ಷಣ ಇಲಾಖೆ ತನಿಖಾ ವರದಿ ಆಧಾರದ ಮೇಲೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಆದರೆ ಪ್ರತಿಭಟನೆ ವೇಳೆ ಒಂದು ಹಂತದಲ್ಲಿ ಶಾಲೆ ಆಡಳಿತ ಮಂಡಳಿ “ನಮ್ಮ ಶಿಕ್ಷಕರು ತಪ್ಪೇ ಮಾಡಿಲ್ಲ, ಆದರೂ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಲು ಮುಂದಾದಾಗ ಪ್ರತಿಭಟನೆ ಇನ್ನಷ್ಟು ಜೋರಾಗಿ “ತಪ್ಪೇ ಮಾಡಿಲ್ಲ ಎಂದಾದರೆ ಅಮಾನತು ಮಾಡುವುದು ಯಾಕೆ? ಮಾಡಿದ ತಪ್ಪನ್ನು ಒಪ್ಪಿಕೊಂಡು ತಪ್ಪಿತಸ್ಥರನ್ನು ಅಮಾನತು ಮಾಡಿ ಎಂದು ಶಾಸಕರು ಆಗ್ರಹಿಸಿದರು.
ಘಟನೆ ಹಿನ್ನೆಲೆ: ಮಂಗಳೂರಿನ ಜೆರೋಸಾ ಶಾಲೆಯ ಏಳನೇ ತರಗತಿ ಶಿಕ್ಷಕಿ ಸಿಸ್ಟರ್ ಪ್ರಭಾ ಫೆ.8 ರಂದು ‘ವರ್ಕ್ ಈಸ್ ವರ್ಶೀಪ್’ ಎಂಬ ವಿಷಯ ಬಗ್ಗೆ ಪಾಠ ಮಾಡುತ್ತಿದ್ದರು. ಈ ವೇಳೆ ಹಿಂದೂ ಧರ್ಮದ ವಿರುದ್ಧ ಹಿಂದೂ ದೇವರುಗಳ ಬಗ್ಗೆ, ನಮ್ಮ ದೇಶದ ಪ್ರಧಾನಿಗಳ ಬಗ್ಗೆ ಹಾಗೂ ಹಿಂದೂ ಧರ್ಮದ ಅಸ್ತಿತ್ವದ ಬಗ್ಗೆ ಪ್ರಶ್ನಿಸಿ, ಹಿಂದೂ ಧರ್ಮವನ್ನು ನಿಂದಿಸಿ, ಹೀಯಾಳಿಸಿ, ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ಶಿಕ್ಷಕಿ ಶಾಲಾ ಮಕ್ಕಳಿಗೆ ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನಕಾರಿ ಬೋಧನೆ ಮಾಡಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ಧರ್ಮ ವಿರೋಧಿ ಭಾವನೆಯನ್ನು ಮೂಡಿಸಲು ಯತ್ನ ಮಾಡಲಾಗಿದ್ದಾರೆ. ಅಲ್ಲದೆ ಅವಹೇಳನದ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸಲು ನಿರ್ಧರಿಸಿದ್ದು, ಎಲ್ಲಾ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲಾ ಆವರಣದಲ್ಲಿ ಸೇರುವಂತೆ ಸಂದೇಶ ರವಾಸಿದ ಆಡಿಯೋ ವೈರಲ್ ಆಗಿತ್ತು. ಅದರಂತೆ, ವಿದ್ಯಾರ್ಥಿಗಳ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲಾ ಆವರಣದಲ್ಲಿ ಜಮಾಯಿಸಿ ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ, ಆಡಳಿತ ಮಂಡಳಿ ಜೊತೆ ಮಾತನಾಡಿ ತೆರಳುವ ವೇಳೆ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಐವನ್ ಡಿಸೋಜಾ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದರು.
ಇನ್ನು ಈ ವಿಚಾರವಾಗಿ ಮಾತನಾಡಿರುವ ಶಾಸಕ ವೇದವ್ಯಾಸ ಕಾಮತ್ ಅವರು, ಧರ್ಮ ಸೂಕ್ಷ್ಮತೆಯನ್ನು ಮರೆತು ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಮುಗ್ಧ ವಿದ್ಯಾರ್ಥಿಗಳ ಮುಂದೆ ಅವಹೇಳನಕಾರಿಯಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿದ ಶಿಕ್ಷಕಿಯ ನಡೆ ಖಂಡನೀಯವಾಗಿದ್ದು, ಘಟನೆ ತೀವ್ರ ಸ್ವರೂಪ ಪಡೆದಿದ್ದರೂ ಸಂತ ಜೆರೋಸಾ ಶಿಕ್ಷಣ ಸಂಸ್ಥೆ ಇಂತಹ ಶಿಕ್ಷಕಿಯನ್ನು ರಕ್ಷಿಸಲು ಯತ್ನಿಸಿದ್ದಂತೂ ಅತ್ಯಂತ ಹೇಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರವಾಗಿ ಮಂಗಳೂರು ಉತ್ತರದ ಶಾಸಕ ಭರತ್ ಶೆಟ್ಟಿ, ಪೋಷಕರು, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಬಿಇಒ ಅವರು ಕೂಡಲೇ ಶಾಲೆಗೆ ಭೇಟಿ ನೀಡಬೇಕು, ತಪ್ಪಿತಸ್ಥ ಶಿಕ್ಷಕರನ್ನು ಅಮಾನತುಗೊಳಿಸಲೇಬೇಕು ಮತ್ತು ಶಾಲೆಯ ಮಾನ್ಯತೆಯನ್ನು ರದ್ದುಪಡಿಸಲು ಶಿಫಾರಸು ಮಾಡಬೇಕೆಂದು ಪಟ್ಟು ಹಿಡಿದರು.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಅವರು ಸಂಪೂರ್ಣ ಘಟನೆಯ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರ ಮನವೊಲಿಸಲು ಯತ್ನಿಸಿದರು.