ಮಲ್ಪೆ: ನಿಯಂತ್ರಣ ತಪ್ಪಿದ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಡಿಕ್ಕಿ -ಓರ್ವ ಮೃತ್ಯು
ಮಲ್ಪೆ ಫೆ.8(ಉಡುಪಿ ಟೈಮ್ಸ್ ವರದಿ): ನಿಯಂತ್ರಣ ತಪ್ಪಿದ ನೀರಿನ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದು ಓರ್ವ ಮೃತಪಟ್ಟ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಟ್ಯಾಂಕರ್ ನ ಕ್ಲೀನರ್ ಜನಾರ್ಧನ್ ಮೃತಪಟ್ಟವರು. ಮಲ್ಪೆ ಬಂದರಿಗೆ ನೀರನ್ನು ಸರಬರಾಜು ಮಾಡಲು ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮಲ್ಪೆಯ ಭಾಸ್ಕರ್ ಪಾಲನ್ ಎಂಬವರ ಬಾವಿಯಿಂದ ನೀರನ್ನು ತುಂಬಿಸಿಕೊಂಡು ಬರಲು ಚಾಲಕ ಸುಜಿತ್ ಹಾಗೂ ಕ್ಲೀನರ್ ಜನಾರ್ಧನ್ ರವರು ನೀರಿನ ಟ್ಯಾಂಕರ್ ಗಾಡಿಯಲ್ಲಿ ಹೊರಟಿದ್ದರು. ಈ ವೇಳೆ ಟ್ಯಾಂಕರ್ ನ ಚಾಲಕ ವಾಹನವನ್ನು ನಿರ್ಲಕ್ಷ್ಯ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ರಸ್ತೆಗೆ ಒಮ್ಮೆಲೇ ತಿರುಗಿಸಿದ ಪರಿಣಾಮ ನೀರಿನ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ 8 ಅಡಿ ಆಳ ಇರುವ ಖಾಲಿ ಜಾಗದಲ್ಲಿ ಟ್ಯಾಂಕರ್ ಬಿದ್ದಿದ್ದು ಕ್ಲೀನರ್ ಜನಾರ್ಧನ್ ರವರು ಟ್ಯಾಂಕರ್ ನ ಅಡಿಯಲ್ಲಿ ಸಿಲುಕಿ ಗಂಭೀರಗಾಯಗೊಂಡಿದ್ದರು. ತಕ್ಷಣ ಗಾಯಾಳು ಕ್ಲೀನರ್ ಜನಾರ್ಧನ್ ಹಾಗೂ ಚಾಲಕ ಸುಜೀತ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಈ ಪೈಕಿ ಜನಾರ್ಧನ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.