ಉಡುಪಿ: ಮುದ್ರಾ ಲೋನ್ ಹೆಸರಲ್ಲಿ ಮಹಿಳೆಗೆ 9.15 ಲ. ರೂ. ವಂಚನೆ
ಉಡುಪಿ ಫೆ.7 (ಉಡುಪಿ ಟೈಮ್ಸ್ ವರದಿ) : ಮುದ್ರಾ ಲೋನ್ ಯೋಜನೆಯ ಏಜೆಂಟ್ ಹೆಸರಿನಲ್ಲಿ ಲೋನ್ ನೀಡುವುದಾಗಿ ನಂಬಿಸಿ ವಿವಿಧ ಚಾರ್ಜ್ ನೆಪದಲ್ಲಿ ಮಹಿಳೆಯೊಬ್ಬರಿಂದ 9.15 ಲಕ್ಷ ರೂ. ಹಣ ಪಡೆದು ಲೋನ್ ನೀಡದೇ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿಯ ಶೈಲಾ ಎಂಬವರು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಮುದ್ರಾ ಲೋನ್ಯೋಜನೆಯಡಿ ಸಾಲ ನೀಡುವ ಬಗ್ಗೆ ಜಾಹೀರಾತಿನಲ್ಲಿ ಸೂಚಿಸಿದ ನಂಬರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಮುದ್ರ ಲೋನ್ ಕೊಡಿಸುವ ಎಜೆಂಟ್ ಎಂಬುದಾಗಿ ನಂಬಿಸಿ ವಿವಿಧ ದಾಖಲಾತಿಯನ್ನು ಪಡೆದು, ರಿಜಿಸ್ಟ್ರೇಶನ್ ಚಾರ್ಜ್, ಎನ್.ಓ.ಸಿ ಹಾಗೂ ಇತರೇ ಚಾರ್ಜ್ ಗಳ ನೆಪದಲ್ಲಿ ಹಣ ಕಟ್ಟುವಂತೆ ತಿಳಿಸಿದ್ದರು. ಇದನ್ನು ನಂಬಿದ ಶೈಲಾ ಅವರು ಆರೋಪಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 2023 ರ ಡಿ.21 ರಿಂದ 2024ರ ಫೆ.3 ರ ವರೆಗೆ ಹಂತ ಹಂತವಾಗಿ ಒಟ್ಟು 9,15,450/- ರೂ ಹಣವನ್ನು ವರ್ಗಾಯಿಸಿದ್ದರು. ಆದರೆ ಆ ಬಳಿಕ ಆರೋಪಿಗಳು ಸಾಲವನ್ನು ನೀಡದೆ , ಪಡೆದ ಹಣವನ್ನೂ ನೀಡದೇ ವಂಚಿಸಿದ್ದಾರೆ ಎಂಬುದಾಗಿ ಶೈಲಾ ಅವರು ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.