ಕುಂದಾಪುರ: ಸ್ಕೂಟರ್ ಡಿಕ್ಕಿ-ಸೈಕಲ್ ಸವಾರ ಮೃತ್ಯು
ಕುಂದಾಪುರ ಫೆ.2 (ಉಡುಪಿ ಟೈಮ್ಸ್ ವರದಿ): ಸ್ಕೂಟರ್ ಡಿಕ್ಕಿ ಹೊಡೆದು ಸೈಕಲ್ ಸವಾರ ಮೃತಪಟ್ಟ ಘಟನೆ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರ ಹೆಸರು ಶ್ರೀಧರ ಎಂದು ಗುರುತಿಸಲಾಗಿದೆ. ಇವರು ನಿನ್ನೆ ರಾತ್ರಿ ಕುಂದಾಪುರ ವಡೆರಹೋಬಳಿ ಗ್ರಾಮದ ಬಸ್ರೂರು ಮೂರುಕೈ ಹತ್ತಿರದ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ತಮ್ಮ ಸೈಕಲ್ ನ್ನು ತಳ್ಳಿಕೊಂಡು ಹೋಗುತ್ತಿದ್ದರು. ಈ ವೇಳೆ ಬಸ್ರೂರು ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ತನ್ನ ಬೈಕನ್ನು ಚಲಾಯಿಸಿಕೊಂಡು ಬಂದ ಸ್ಕೂಟರ್ ಸವಾರ ಸಂದೇಶ ಎಂಬಾತ ಶ್ರೀಧರ್ ಅವರ ಸೈಕಲ್ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಶ್ರೀಧರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ತಂಗಿ ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.