ಡೆಲ್ಟಾ ಬೀಚ್‍ನಲ್ಲಿ ನೀರುಪಾಲದ ವ್ಯಕ್ತಿ ಮೃತದೇಹ ಮಲ್ಪೆ ಬೀಚ್‍ನಲ್ಲಿ ಪತ್ತೆ
ಮಲ್ಪೆ ಜ.30(ಉಡುಪಿ ಟೈಮ್ಸ್ ವರದಿ): ಕೋಡಿ-ಬೆಂಗ್ರೆಯ ಡೆಲ್ಟಾ ಬೀಚ್ ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿಯ ಮೃತದೇಹ ಮಲ್ಪೆ ಬೀಚ್‍ನಲ್ಲಿ ಪತ್ತೆಯಾಗಿದೆ.
ಬೆಂಗಳೂರು ಮೂಲದ ನಿತಿನ್ (35) ಮೃತಪಟ್ಟವರು. ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು, ಬ್ಯಾಂಕಿಗೆ ರಜೆ ಇದ್ದ ಕಾರಣ ಜ.26 ರಂದು ತಮ್ಮ ಸ್ನೇಹಿತರಾದ ಸಂಜಯ್ ಮತ್ತು ಆನಂದ್ ಕುಮಾರ್ ರೊಂದಿಗೆ ಉಡುಪಿಗೆ ಬಂದಿದ್ದರು. ಮಲ್ಪೆಯಲ್ಲಿ ಗೆಸ್ಟ್ ಹೌಸ್‍ವೊಂದರಲ್ಲಿ ಉಳಿದುಕೊಂಡಿದ್ದ ಅವರು, 27 ರಂದು ಬೆಳಿಗ್ಗೆ ಮಣಿಪಾಲ ಕಡೆ ಸುತ್ತಾಡಿ, ಅದೇ ದಿನ ಮದ್ಯಾಹ್ನದ ವೇಳೆ ಕೋಡಿ-ಬೆಂಗ್ರೆ ಡೆಲ್ಟಾ ಬೀಚ್‍ಗೆ ಹೋಗಿದ್ದರು. ಅಲ್ಲಿ ಸ್ನೇಹಿತರೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದಾಗ ನಿತಿನ್ ರವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು, ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಇವರನ್ನು ಮೀನುಗಾರರು, ಪೊಲೀಸರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ನಿನ್ನೆ ಮಧ್ಯಾಹ್ನದ ವೇಳೆ ಮಲ್ಪೆ ಬೀಚ್ ನಲ್ಲಿ ನಿತಿನ್‍ರವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮೃತರ ಅಣ್ಣ ನೀಡಿದ ಮಾಹಿತಿಯಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.