ಉಡುಪಿ: ವಿದ್ಯಾರ್ಥಿಗೆ ಚಾಕುವಿನಿಂದ ಇರಿತ
ಉಡುಪಿ ಜ.30(ಉಡುಪಿ ಟೈಮ್ಸ್ ವರದಿ): ವಿದ್ಯಾರ್ಥಿಯೋರ್ವನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆದಿದೆ.
ಬ್ರಹ್ಮಾವರದ ಹೇರೂರಿನ ಪ್ರತೀಕ್ (17) ಹಲ್ಲೆಗೊಳಗಾದ ವಿದ್ಯಾರ್ಥಿ. ಉಡುಪಿಯ ಕೋಚಿಂಗ್ ಸೆಂಟರ್ವೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಈತ ಎರಡು ತಿಂಗಳ ಹಿಂದೆ ಖರೀದಿಸಿದ್ದ ಸೆಕೆಂಡ್ ಹ್ಯಾಂಡ್ ಬೈಕ್ ಬಗ್ಗೆ ಅದೇ ಕೊಚಿಂಗ್ ಸೆಂಟರ್ನ ಪರಿಚಯದ ವಿದ್ಯಾರ್ಥಿ ಸುಹಾಸ್ ಎಂಬಾತ ಕದ್ದಿರುವ ಬೈಕ್ ಎಂದು ನಿಂದಿಸಿದ್ದ. ಅಲ್ಲದೆ ಪ್ರತೀಕ್ ಅವರು ನಿನ್ನೆ ಮಧ್ಯಾಹ್ನದ ವೇಳೆ ಎಂಜಿಎಂ ಮೈದಾನಕ್ಕೆ ಹೋದಾಗ ಸ್ಥಳದಲ್ಲಿ ಇದ್ದ ಆರೋಪಿಗಳಾದ ಸುಹಾಸ್, ಮೋನೀಶ್, ತರುಣ್ ಹಾಗೂ ಇತರ ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಹಾಗೂ ಆರೋಪಿ ತರುಣ್ ಎಂಬಾತ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಪ್ರತೀಕ್ ಅವರ ಹೊಟ್ಟೆ ಹಾಗೂ ತೊಡೆಯ ಭಾಗಕ್ಕೆ ಇರಿದು ಜೀವ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಪ್ರತೀಕ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.