ಕಾಪು: ಮನೆಯಲ್ಲಿ ಕಳ್ಳತನ
ಕಾಪು ಜ.29(ಉಡುಪಿ ಟೈಮ್ಸ್ ವರದಿ): ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವುಗೈದಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ಠಾಣಾ ವ್ಯಾಪ್ತಿಯ ನಿವಾಸಿ ಇಬ್ರಾಹಿಂ ಮಹಮ್ಮದ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ನಿನ್ನೆ ಬೆಳಿಗ್ಗೆ ಮದುವೆ ಕಾರ್ಯಕ್ರಮದ ನಿಮಿತ್ತ ತಮ್ಮ ಮನೆಗೆ ಬೀಗ ಹಾಕಿ ಸುರತ್ಕಲ್ಗೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಸಂಜೆ ವಾಪಸ್ಸು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.
ಮನೆಯ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು, ಕೋಣೆಯಲ್ಲಿದ್ದ ಕಪಾಟಿನ ಬಾಗಿಲನ್ನು ತೆರೆದು ಅದರಲ್ಲಿದ್ದ 72,000/- ರೂ. ಮೌಲ್ಯದ ಚಿನ್ನ, 25,000/- ರೂ. ಮೌಲ್ಯದ ವಾಚ್ ಸೇರಿ ಒಟ್ಟು 97,000/- ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.