ಕಾಪು:ಬೈಕ್ಗಳ ನಡುವೆ ಅಪಘಾತ- ಸಹಸವಾರ ಮೃತ್ಯು
ಕಾಪು ಜ.29(ಉಡುಪಿ ಟೈಮ್ಸ್ ವರದಿ): ದ್ವಿಚಕ್ರ ವಾಹನಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಸಹಸವಾರ ಮೃತಪಟ್ಟ ಘಟನೆ ಕಾಪುವಿನ ಉಳಿಯಾರಗೋಳಿ ಗ್ರಾಮದ ಕೋತಲ್ ಕಟ್ಟೆ ಎಂಬಲ್ಲಿ ನಡೆದಿದೆ.
ಪಾಂಗಳದ ವೆಲ್ ಲಿಂಗ್ಸ್ ಕಂಪೆನಿಯೊಂದರ ಕಾರ್ಮಿಕ ಮಲ್ಲಪ್ಪ(52) ಮೃತಪಟ್ಟವರು. ಇವರು ತಮ್ಮೊಂದಿಗೆ ಕೆಲಸ ಮಾಡಿಕೊಂಡಿದ್ದ ಜಯನ್ ಎಸ್ ಎಂಬವರೊಂದಿಗೆ ಬೈಕಿನಲ್ಲಿ ಸಹಸವಾರರಾಗಿ ಉಡುಪಿ-ಮಂಗಳೂರು ರಸ್ತೆಯಲ್ಲಿ ಕಾಪು ಕಡೆಗೆ ಹೋಗುತ್ತಿದ್ದರು. ಈ ವೇಳೆ ಕಾಪುವಿನ ಉಳಿಯಾರಗೋಳಿ ಗ್ರಾಮದ ಕೋತಲ್ ಕಟ್ಟೆ ಎಂಬಲ್ಲಿರುವ ಫ್ಯಾಕ್ಟರಿಯೊಂದರ ಎದುರಿನ ಸರ್ವೀಸ್ ರಸ್ತೆ ತಲುಪುತ್ತಿದ್ದಾಗ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಮಟ್ಟು ನಿವಾಸಿ ಶ್ರೀನಿವಾಸ್ ಎಂಬಾತ ತನ್ನ ಬೈಕನ್ನು ತೀವ್ರ ನಿರ್ಲಕ್ಷ್ಯತನದಿಂದ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದಿದ್ದ ಪರಿಣಾಮ ಜಯನ್ ಅವರ ಬೈಕ್ ನಿಯಂತ್ರಣ ಕಳೆದುಕೊಂಡು ಶ್ರೀನಿವಾಸ್ರವರ ಬೈಕ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಜಯನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹಿಂಬದಿ ಸವಾರ ಮಲ್ಲಪ್ಪ ನವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪರೀಕ್ಷಿಸಿದ ವೈಧ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಜಯನ್ ಎಸ್ ಅವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.