ಶ್ರೀಕ್ಷೇತ್ರ ಪೆರ್ಣಂಕಿಲ: ವೈಭವದ ಕಾರ್ತಿಕ ದೀಪಾರಾಧನೆ
ಉಡುಪಿ: ಸಮಗ್ರ ಜೀರ್ಣೋದ್ಧಾರದ ಮಧ್ಯದಲ್ಲಿಯೇ ಪೂಜ್ಯ ಪೇಜಾವರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ವೈಭವದ ಕಾರ್ತಿಕ ದೀಪಾರಾಧನೆ ಜರಗಿತು. ಗುರುಗಳು ದೇವತಾ ಸಾನಿಧ್ಯದಲ್ಲಿ ಪ್ರಾರ್ಥನೆಗೈದು ದೀಪಾರಾಧನೆಗೆ ಚಾಲನೆ ನೀಡಿದರು. ಉಭಯ ದೇಗುಲಗಳ ಮತ್ತು ಶಾಖಾಮಠದ ಕಾಮಗಾರಿ ವೀಕ್ಷಿಸಿ ಮಾರ್ಗದರ್ಶನ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀವತ್ಸ ಭಟ್ ಅವರ ದೇವತಾ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ಸಭಾವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾನ್ವಿತ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಅಧ್ಯಕ್ಷರಾದ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು.
ಇದೇ ಸಂದರ್ಭದಲ್ಲಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪೇಜಾವರ ಮಠದ ನಿಕಟವರ್ತಿ ಪಾಕತಜ್ಞ ಲಕ್ಷ್ಮೀನಾರಾಯಣ (ಯಜ್ಞನಾರಾಯಣ) ಭಟ್ ಅವರನ್ನು ಗೌರವಿಸಲಾಯಿತು. ಭಗವದ್ಭಕ್ತರು ದೇವಾಲಯದ ಪ್ರಾಂಗಣದಲ್ಲಿ ದೀಪಗಳನ್ನು ಉರಿಸಿ ಸಂಭ್ರಮಿಸಿದರು. ಭಕ್ತಾಭಿಮಾನಿಗಳು ಜೀರ್ಣೋದ್ಧಾರ ನಿಧಿಗೆ ದೇಣಿಗೆಯನ್ನು ಗುರುಗಳ ಬಳಿ ಸಮರ್ಪಿಸಿದರು. ಶ್ರೀಗಳು ಫಲ ಮಂತ್ರಾಕ್ಷತೆಯೊಂದಿಗೆ ದಾನಿಗಳನ್ನು ಗೌರವಿಸಿದರು. ಎಲ್ಲ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.