ಗಂಗೊಳ್ಳಿ:ಆಕಸ್ಮಿಕವಾಗಿ ಹೊಳೆಗೆ ಬಿದ್ದು ವ್ಯಕ್ತಿ ಸಾವು
ಗಂಗೊಳ್ಳಿ ಎ.22 (ಉಡುಪಿ ಟೈಮ್ಸ್ ವರದಿ) : ಆಕಸ್ಮಿಕವಾಗಿ ಹೊಳೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ವಿಜಯ(45) ಮೃತಪಟ್ಟವರು. ಎ.21 ರಂದು ತಮ್ಮ ಸ್ವಂತ ದೋಣಿಯಲ್ಲಿ ಮರವಂತೆಯಿಂದ ತಂಗಿಯ ಮನೆಯಾದ ನಾಡಾ ಗ್ರಾಮಕ್ಕೆ ತನ್ನ ತಂದೆ, ತಾಯಿಯೊಂದಿಗೆ ಹೋಗಿದ್ದು. ನಂತರ ವಿಜಯ ಅವರು ಮಧ್ಯಾಹ್ನದ ವೇಳೆಗೆ ತಾನು ಹೋಗುವುದಾಗಿ ತಂದೆಗೆ ತಿಳಿಸಿ ಅಲ್ಲಿಂದ ತೆರಳಿದ್ದರು.
ಆದರೆ ಸಂಜೆ ವೇಳೆಗೆ ವಿಜಯ ಅವರ ತಂದೆ ಮತ್ತು ತಾಯಿಯವರು ಮನೆಗೆ ತೆರಳಲು ಹೊಳೆಯ ಬದಿ ಬಂದು ನೋಡಿದಾಗ ವಿಜಯ ಅವರ ದೋಣಿ ಮತ್ತು ಜಲ್ಲು ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಬಳಿಕ ಮನೆಗೆ ಬಂದು ವಿಜಯರವರ ಹೆಂಡತಿಯಲ್ಲಿ ವಿಚಾರಿಸಿದಾಗ ಮನೆಗೆ ಬಂದಿಲ್ಲ ಎಂದು ಅವರು ತಿಳಿಸಿದ್ದರು. ನಂತರ ಸ್ಥಳೀಯರಾದ ಕೆನ್ಯೂಟ್ ಗೋನ್ಸಾಲಿಸ್ ರವರು ಮತ್ತು ನೆರೆಕೆರೆಯವರು ಹುಡುಕಾಡಿದಾಗ ಕೋಟೆಮನೆ ದೋಣಿ ಕಡುವಿನಲ್ಲಿ ವಿಜಯ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ವಿಜಯ ಅವರು ದೋಣಿ ದಾಟಿಸುವಾಗ ಆಕಸ್ಮಿಕವಾಗಿ ಸೌಪರ್ಣಿಕ ಹೊಳೆಯಲ್ಲಿ ದೋಣಿ ಮುಗುಚಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.