ಉಡುಪಿ: ನ.23-26 ಅಖಿಲ ಭಾರತ ಅಂತರ್ ವಿ.ವಿ ಕಬಡ್ಡಿ ಪಂದ್ಯಾಟ
ಉಡುಪಿ (ಉಡುಪಿ ಟೈಮ್ಸ್ ವರದಿ ): ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಜಂಟಿ ಆಶ್ರಯದಲ್ಲಿ “ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕಬಡ್ಡಿ ಪಂದ್ಯಾವಳಿ 2023-24″ ನವೆಂಬರ್ 23 ರಿಂದ 26ರವರೆಗೆ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯಲಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಅವರು, ಉದ್ಘಾಟನಾ ಸಮಾರಂಭವು ನವೆಂಬರ್ 23 ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ, ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷರಾದ ಡಾ.ಜಿ ಶಂಕರ್, ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಾಧಿಕಾರಿ ಡಾ.ಎ.ಪಿ.ಭಟ್, ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿ.ಎ ಪ್ರಶಾಂತ್ ಹೊಳ್ಳ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ.ರಾಮು ಎಲ್, ಉಪಸ್ಥಿತರಿರುವರು ಎಂದು ತಿಳಿಸಿದರು.
ಕಳೆದ ಐದಾರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿ ಹೆಸರುವಾಸಿಯಾಗಿರುವ ಪೂರ್ಣಪ್ರಜ್ಞ ಕಾಲೇಜು, 2018ರಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ‘ನೆಟ್ ಬಾಲ್ ಚಾಂಪಿಯನ್ಶಿಪ್’. 2019ರಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ‘ಕಬಡ್ಡಿ ಚಾಂಪಿಯನ್ಶಿಪ್’ ಮತ್ತು ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ‘ವಾಲಿಬಾಲ್ ಚಾಂಪಿಯನ್ಶಿಪ್-2023 ನ್ನು ಯಶಸ್ವಿಯಾಗಿ ಆಯೋಜಿಸಿದೆ.
ಇದೀಗ ಕಳೆದ 5 ವರ್ಷಗಳಲ್ಲಿ ಎರಡನೇ ಬಾರಿಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕಬಡ್ಡಿ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ದೇಶದ ವಿವಿಧ ಝೋನ್ಗಳಿಂದ ಆಯ್ಕೆಗೊಂಡ ಬಲಾಡ್ಯ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉಡುಪಿಗೆ ಆಗಮಿಸುತ್ತಿವೆ ಎಂದು ತಿಳಿಸಿದರು. ಬಳಿಕ ಮಾತನಾಡಿದ ಮಂಗಳೂರು ವಿವಿಯ ದೈಹಿಕ ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ ಜೆರಾಲ್ಡ್ ಸಂತೋಷ್ ಡಿ ಸೋಜ ಮಂಗಳೂರು ವಿಶ್ವ ವಿದ್ಯಾಲಯದಿಂದ ಎಲ್ಲಾ ಸಹಕಾರವನ್ನು ನೀಡಲಾಗುತ್ತದೆ ಎಂದರು.
ಈ ನಾಲ್ಕು ದಿನಗಳ ಕ್ರೀಡಾಕೂಟದಲ್ಲಿ ನಾಲ್ಕು ವಲಯಗಳಿಂದ 16 ತಂಡಗಳು, ಸುಮಾರು 250 ಕ್ರೀಡಾಪಟುಗಳು, 40 ಕ್ರೀಡಾ ತರಬೇತುದಾರರು, 50 ತಂಡದ ವ್ಯವಸ್ಥಾಪಕರು ಮತ್ತು ತೀರ್ಪುಗಾರರು ಭಾಗವಹಿಸುವುದಾಗಿ ಹೇಳಿದರು.ನವೆಂಬರ್ 25 ರಂದು ಸಂಜೆ 06:00 ಗಂಟೆಗೆ ‘ಪ್ರಜ್ಞಾ ಗೌರವ’ ಸಮಾರಂಭ ನಡೆಯಲಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆಗೈದ ಕಾಲೇಜಿನ ಪೂರ್ವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಉಡುಪಿ ಶ್ರೀ ಅದಮಾರು ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹಾಗೂ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿರುವರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕರಾದ ರಘುಪತಿ ಭಟ್, ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ, ಕಾಂಚನ್ ಆಟೋಮೊಬೈಲ್ ಪ್ರೈ. ಲಿಮಿಟೆಡ್ ಇದರ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರಸಾದರಾಜ್ ಕಾಂಚನ್, ಮುಂಬೈ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರ್, ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿ. ಎ. ಪ್ರಶಾಂತ್ ಹೊಳ್ಳ, ಅದಮಾರು ಪೂರ್ಣಪ್ರಜ್ಞ ಪಿಯು ಕಾಲೇಜಿನ ಗೌರವಕಾರ್ಯದರ್ಶಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಗಮನ ಸೆಳೆಯಲಿರುವ ವೈಶಿಷ್ಟತೆಗಳು
- ಹೈ ಸ್ಟ್ಯಾಂಡರ್ಡ್ ವಿಶೇಷ ತಂತ್ರಜ್ಞಾನಗಳಿಂದ ಅಳವಡಿಸಿದ ಒಳಾಂಗಣ
- ಈ ಪಂದ್ಯಾವಳಿಯು ನವೆಂಬರ್ 23 ರಿಂದ 26 ರವರೆಗೆ ಹಗಲು ಮತ್ತು ರಾತ್ರಿ ನಡೆಯಲಿದ್ದು, ಕ್ರೀಡಾಪಟುಗಳು, ತಂಡದ ವ್ಯವಸ್ಥಾಪಕರು, ರೆಫ್ರಿಗಳಿಗೆ ಸುಸಜ್ಜಿತ ಉಚಿತ ವಸತಿ, ದಕ್ಷಿಣ ಮತ್ತು ಉತ್ತರ ಭಾರತೀಯ ಶೈಲಿಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
- ವಿಶೇಷ ಆಕರ್ಷಣೆಯಾಗಿ ಪ್ರೊ ಕಬ್ಬಡಿಯ ತಾರಾ ಆಟಗಾರರು ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮು ಎಲ್, ಎಐಐಯು ಕಬಡ್ಡಿ ಪಂದ್ಯಾವಳಿಯ ಸಂಯೋಜಕ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಸುಕುಮಾರ್ ಭಾಗವಸಿದ್ದರು.