ಕಾರ್ಖಾನೆಯ ಗುಜರಿ ಮಾರಾಟದಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ- ಮಹಾ‌ಸಭೆಯಲ್ಲಿ ಭಾರೀ‌ ಗದ್ದಲ

ಬ್ರಹ್ಮಾವರ, ಸೆ.11: ಜಿಲ್ಲೆಯ ಏಕೈಕ ಸಹಕಾರಿ ಕಾರ್ಖಾನೆಯಾದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಗೊಂದಲದ ಗೂಡಾದ ಕಾರಣ ಸಭೆಯನ್ನು ಮುಂದೂಡಲಾಗಿದೆ.

ಬ್ರಹ್ಮಾವರ ಹೊಟೇಲ್ ಆಶ್ರಯದ ಚಂದಮ್ಮ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ 12ಗಂಟೆಗೆ ನಿಗದಿಯಾದ ಸಭೆಯನ್ನು ಸದಸ್ಯರ ಆಕ್ರೋಶ, ಧಿಕ್ಕಾರಗಳ ನಡುವೆ ಪ್ರಾರಂಭಗೊಂಡ ಅರ್ಧ ಗಂಟೆಯೊಳಗೆ ಮುಂದೂಡುವುದಾಗಿ ಕಾರ್ಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಘೋಷಿಸಿದರು.

ಈ ಘೋಷಣೆಗೂ ಒಪ್ಪದ ಸದಸ್ಯರು, ಈ ಬಗ್ಗೆ ನಿರ್ಣಯ ಕೈಗೊಂಡು ಅಧಿಕೃತವಾಗಿ ಪ್ರಕಟಿಸ ಬೇಕೆಂದು ಆಗ್ರಹಿಸಿದಾಗ ಕಾರ್ಖಾನೆಯ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾದ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್ ಅಧಿಕೃತವಾದ ಹೇಳಿಕೆ ಪ್ರಕಟಿಸಿ ಮುಂದಿನ ದಿನಾಂಕವನ್ನು ಸೆ.25ರೊಳಗೆ ನಿಗದಿ ಪಡಿಸಿ ಎಲ್ಲಾ ಸದಸ್ಯರಿಗೂ ಮಾಹಿತಿ ತಲುಪಿಸುವುದಾಗಿ ಘೋಷಿಸಿದರು.

ಕಾರ್ಖಾನೆಯ ಗುಜರಿ ಮಾರಾಟದಲ್ಲಿ ವ್ಯಾಪಕ ಭ್ರಷ್ಟಾಚಾರ….! ಇದಕ್ಕೆ ಮುನ್ನ ವಿಧಾನಪರಿಷತ್‌ನ ಮಾಜಿ ಸಭಾಪತಿ ಕೆ. ಪ್ರತಾಪ್‌ ಚಂದ್ರ ಶೆಟ್ಟಿ ಅಧ್ಯಕ್ಷತೆಯ ಉಡುಪಿ ಜಿಲ್ಲಾ ರೈತ ಸಂಘವು ಪಕ್ಕದ ಅಂಬಾ ಸಭಾಭವನದಲ್ಲಿ ನಡೆಸಿ, ಈಗಿನ ಆಡಳಿತ ಮಂಡಳಿ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆಸಿದ ವ್ಯಾಪಕ ಭ್ರಷ್ಟಾಚಾರದ ಎಳೆಎಳೆಯನ್ನು ಬಿಡಿಸಿಟ್ಟು, ಇಂದಿನ ಎಜಿಎಂನಲ್ಲಿ ಈ ಬಗ್ಗೆ ಆಡಳಿತ ಮಂಡಳಿಯನ್ನು ಪ್ರಶ್ನಿಸಿಬೇಕೆಂದು ಕರೆನೀಡಿದರು.

ಅದರಂತೆ ಎಜಿಎಂ ಸಭೆ ಆರಂಭಗೊಳ್ಳುತಿದ್ದಂತೆ ಕಾರ್ಖಾನೆಯ ಮಾಜಿ ನಿರ್ದೇಶಕ ಹಾಗೂ ಹಾಲಿ ಸದಸ್ಯ ಪ್ರಕಾಶ್ ಚಂದ್ರ ಶೆಟ್ಟಿ ಕಂಬದಕೋಣೆ, ಕಾರ್ಖಾನೆಯ ಎಲ್ಲಾ ಸಕ್ರಿಯ ಸದಸ್ಯರಿಗೆ ಎಜಿಎಂನ ನೋಟೀಸನ್ನು ಉದ್ದೇಶ ಪೂರ್ವಕವಾಗಿ ನೀಡದೇ ಕಾನೂನುಬಾಹಿರವಾಗಿ ಇಂದಿನ ಸಭೆ ನಡೆಯುತ್ತಿದೆ. ಸರ್ವಸದಸ್ಯರ ಸಭೆಗೆ ಬೇಕಾದ ಕೋರಂ ಇಲ್ಲದ ಕಾರಣ ಸಭೆಯನ್ನು ಮುಂದೂಡುವಂತೆ ಬಲವಾಗಿ ಆಗ್ರಹಿಸಿದರು. ಅವರೊಂದಿಗೆ ಸೇರಿದ ಬಹುಸಂಖ್ಯಾತ ರೈತರು ಬೆಂಬಲ ನೀಡಿ ಘೋಷಣೆಗಳನ್ನು ಕೂಗಿದರು.

ಮತ್ತೊಬ್ಬ ಸದಸ್ಯ ಹರಿಪ್ರಸಾದ್ ಶೆಟ್ಟಿ, ರೈತರ ಸಕ್ಕರೆ ಕಾರ್ಖಾನೆಯ ಎಜಿಎಂನಲ್ಲಿ ಉಪಸ್ಥಿತರಿರುವ ಬೌನ್ಸರ್‌ಗಳ ಕುರಿತು ಬಲವಾಗಿ ಆಕ್ಷೇಪಿಸಿದಾಗ ಗದ್ದಲ ಜೋರಾಯಿತು. ಅವರನ್ನು ತಕ್ಷಣ ಇಲ್ಲಿಂದ ಹೊರ ಕಳುಹಿಸುವಂತೆ ಎಲ್ಲರೂ ಆಗ್ರಹಿಸಿದರು.

ಮಧ್ಯಪ್ರವೇಶಿಸಿ ಮಾತನಾಡಿದ ಕಾರ್ಖಾನೆಯ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ನನಗೆ ಬೆದರಿಕೆ ಇರುವುದರಿಂದ ಅವರನ್ನು ನನ್ನ ರಕ್ಷಣೆಗಾಗಿ ವೈಯಕ್ತಿಕ ನೆಲೆಯಲ್ಲಿ ಕರೆದಿದ್ದೇನೆ ಎಂದು ಸಮಜಾಯಿಷಿ ನೀಡಿದರು. ನಿಮ್ಮ ರಕ್ಷಣೆಗೆ 10 ಮಂದಿ ಬೌನ್ಸರ್‌ಗಳು ಬೇಕಾ ಎಂದು ಜನ ಮತ್ತೆ ಬೊಬ್ಬೆ ಹೊಡೆದರು.

ಗದ್ದಲ ಜೋರಾದಾಗ, ಸಭೆಯನ್ನು 15 ನಿಮಿಷ ಮುಂದೂಡಿದ್ದು, ಸದಸ್ಯರಲ್ಲದವರು ಸಭೆಯಿಂದ ಹೊರನಡೆಯಿರಿ. ಮತ್ತೆ ಸಭೆಯನ್ನು ಮುಂದು ವರಿಸಲಾಗುವುದು ಎಂದು ಸುಪ್ರಸಾದ ಶೆಟ್ಟಿ ಪ್ರಕಟಿಸಿದಾಗ, ಸಭೆಯಲ್ಲಿದ್ದ ಅಷ್ಟೂ ಮಂದಿ ಅದನ್ನು ವಿರೋಧಿಸಿದರು. ಸಭೆ ಕಾನೂನುಬದ್ಧವಾಗಿ ನಡೆಯುತ್ತಿಲ್ಲ. ಇದನ್ನು ಮುಂದೂಡಿ ಮತ್ತೊಂದು ದಿನ ಎಲ್ಲರನ್ನೂ ನೋಟೀಸು ಕಳುಹಿಸಿ ಆಹ್ವಾನಿಸಿ ಸಭೆ ನಡೆಸಿ ಎಂದು ದೊಡ್ಡ ಧ್ವನಿಯಲ್ಲಿ ಒತ್ತಾಯಿಸಿದರು.

ಸಭೆಯನ್ನು ನಿಯಂತ್ರಿಸಲು ವಿಫಲರಾದ ಬಳಿಕ ಸುಪ್ರಸಾದ್ ಶೆಟ್ಟಿ ಸಭೆಯನ್ನು ಮುಂದೂಡುವುದಾಗಿ ಘೋಷಿಸಿದರು. ಸೆ.25ರೊಳಗೆ ಮತ್ತೆ ಸಭೆಯನ್ನು ನಡೆಸಬೇಕಿದೆ ಎಂದು ಡಿಆರ್ ರಮೇಶ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!