ಉಡುಪಿ: ನಗರದಲ್ಲಿ ಸರಣಿ ಕಳ್ಳತನ
ಉಡುಪಿ(ಉಡುಪಿ ಟೈಮ್ಸ್ ವರದಿ) : ನಗರದ ಬೈಲೂರು ಮತ್ತು ಮಾರ್ಪಳ್ಳಿ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಇದೀಗ ಒಂದೇ ದಿನ 4 ಕಡೆಗಳಲ್ಲಿ ಕಳ್ಳತನ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಬೈಲೂರಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯ ಹೊರಗೆ ಮಲಗಿದ್ದ ಮಹಿಳೆಯೊಬ್ಬರ ಬಳಿ ಇದ್ದ ಕರಿಮಣಿಸರ ಕಳವು ಮಾಡಿದ್ದಾರೆ. ಇದೇ ವೇಳೆ ಮಾರ್ಪಳ್ಳಿ ನಂದಗೋಕುಲದಲ್ಲಿ ಬಬ್ಬು ಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿ ಕಳವು ಮಾಡಿದ್ದಾರೆ. ಇಲ್ಲಿನ ಕೋಳಿ ಅಂಗಡಿಯ ಬೀಗ ಮುರಿದು ನುಗ್ಗಿದ ಕಳ್ಳರು 200 ರೂ ಕಳವು ಮಾಡಿದ್ದು, ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ರಿಕ್ಷಾದಿಂದ 2000 ರೂ ಕಳವು ಮಾಡಿದ್ದಾರೆ.
ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳಿಂದ ಬೆಂಕಿ: ಇಷ್ಟೇ ಅಲ್ಲದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೈಲೂರು 76 ಬಡಗುಬೆಟ್ಟು ಗ್ರಾಮದ ಹರೀಶ್ ಕುಮಾರ್ ಭಟ್ ಅವರು ಏ.5 ರಂದು ಮನೆಯ ಅಂಗಳದಲ್ಲಿ ತಮ್ಮ ಬೈಕ್ ಪಾರ್ಕ್ ಮಾಡಿದ್ದರು. ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹರೀಶ್ ಅವರು ಮನೆಯಿಂದ ಹೊರಗೆ ಬರದಂತೆ ಮನೆಯ ಹೊರಗಡೆಯಿಂದ ಚಿಲಕ ಹಾಕಿ ಬೈಕ್ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮತ್ತು ಇನ್ನೊಂದು ಪ್ರಕರಣವು ಬೈಲೂರು 76 ಬಡಗುಬೆಟ್ಟು ಗ್ರಾಮದ ಅಬ್ದುಲ್ ರಶೀದ್ ಎಂಬವರು ಏ.5 ರಂದು ಮನೆಮುಂದೆ ತಮ್ಮ ರಿಕ್ಷಾವನ್ನು ಪಾರ್ಕ್ ಮಾಡಿದ್ದರು. ಈ ವೇಳೆ ತಡರಾತ್ರಿ ಮನೆಗೆ ಬಂದ ಯಾರೋ ಇಬ್ಬರು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ರಿಕ್ಷಾ ಸಂಪೂರ್ಣ ಸುಟ್ಟು ಕರಕಲಾಗಿದೆ.
ಇದೀಗ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.